ಕೆಪಿಎಸ್ಸಿ ಅಕ್ರಮ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ

KPSC
Published on

ಬೆಂಗಳೂರು: ಕೆಪಿಎಸ್​ಸಿ 2011ರ ಗೆಜೆಟೆಡ್ ಪೊ›ಬೇಷನರಿ ಹುದ್ದೆಗಳ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತ ವಿಚಾರಣೆಗೆ ಅನುಮತಿ ಕೊಡುವ ಬಗ್ಗೆ ತೀರ್ವನಕ್ಕೆ ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಮತ್ತು 9 ಮಾಜಿ ಸದಸ್ಯರ ವಿರುದ್ಧ ವಿಚಾರಣೆಗೆ ಅನುಮತಿ ಕೊಡುವ ವಿಚಾರದಲ್ಲಿ ಸಾಕಷ್ಟು ಕಾನೂನು ತೊಡಕುಗಳಿವೆ. ಈ ಬಗ್ಗೆ ವಿಚಾರಣೆಗೆ ಒಳಪಡಿಸಬೇಕೆ? ಬೇಡವೆ? ಎನ್ನುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ವರದಿ ಪಡೆಯಲು ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗುತ್ತಿದೆ. ಸಮಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಇರಲಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಡ್ವೋಕೇಟ್ ಜನರಲ್ ದೂರು ಆಧರಿಸಿ ಸಿಐಡಿ ಪ್ರಕರಣ ದಾಖಲು ಮಾಡಿತ್ತು. ಕೆಪಿಎಸ್​ಸಿ ಸದಸ್ಯರ ವಿರುದ್ಧವಾಗಿ ವಿಚಾರಣೆ ಮಾಡಬೇಕೆ? ಬೇಡವೆ? ಎಂಬ ಚರ್ಚೆ ನಮ್ಮ ಮುಂದಿತ್ತು. ವಿಚಾರಣೆ ನಡೆಸಲು ರಾಷ್ಟ್ರಪತಿಗಳ ಅನುಮತಿ ಬೇಕಾಗುತ್ತದೆ. ಆದರೆ, ಹಿಂದಿನ ಸರ್ಕಾರ ಆಕಸ್ಮಿಕವಾಗಿ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೇಳಿತ್ತು. ಇದು ಕಾನೂನು ಸಮ್ಮತ ಅಲ್ಲ ಎಂದು ಕಡತ ಹಾಗೇ ಇತ್ತು. ಈ ಮಧ್ಯೆ ವಿಧಾನ ಮಂಡಲದ ಅಧಿವೇಶನದಲ್ಲಿ ಎಲ್ಲ ಸದಸ್ಯರು ಈ ಪ್ರಕರಣದಲ್ಲಿ ಗುರುತರ ಆರೋಪ ಯಾವುದೂ ಇಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ತೊಂದರೆ ಮಾಡಬೇಡಿ ಎಂಬ ಬೇಡಿಕೆ ಇಟ್ಟಿದ್ದರು. ಹಾಗಾಗಿ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ್ದರಿಂದ ಉಪ ಸಮಿತಿ ರಚಿಸಲು ತೀರ್ವನಿಸಲಾಗಿದೆ. ಪ್ರಕರಣವನ್ನು ವಿಸ್ಕೃತವಾಗಿ ಸಮಿತಿ ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಆ ಬಳಿಕ ಸಂಪುಟ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದಿ ಹೇರಿಕೆ ವಿರುದ್ಧ ದರ್ಶನ್​ ಖಡಕ್​ ಪೋಸ್ಟ್​; ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್​ ಆಚರಣೆ ಬೇಡವೆಂದ ದಚ್ಚು

ಮೂರು ವಿಧೇಯಕಕ್ಕೆ ಅಸ್ತು
  1. ಕರ್ನಾಟಕ ಸಾದಿಲ್ವಾರು ನಿಧಿ(ತಿದ್ದುಪಡಿ) ವಿಧೇಯಕ- 2020ಕ್ಕೆ ಅನುಮೋದನೆ.
  2. ಕೈಗಾರಿಕಾ ವಿವಾದ ಮತ್ತು ಕೆಲ ಇತರ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ- 2020ಕ್ಕೆ ಅಸ್ತು.
  3. ಕರ್ನಾಟಕ ನ್ಯಾಯಾಲಯದ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ(ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ.
ಪ್ರಮುಖ ನಿರ್ಣಯಗಳು
  • ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ 583 ಎಕ್ಸ್​ರೇ ಘಟಕಕ್ಕೆ ಅಟಾಮಿಕ್ ಎನರ್ಜಿ ಅಥಾರಿಟಿ ಪ್ರಕಾರ ಸುರಕ್ಷತೆ ಕಲ್ಪಿಸಲು 11.66 ಕೋಟಿ ರೂ. ಅನುದಾನ.
  • ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ 84.69 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ
  • ನೆಲಮಂಗಲ ತಾಲೂಕು ಎಲಚಗೆರೆ ಹೋಬಳಿ ಸಿದ್ಧಗಂಗಾ ಮಠಕ್ಕೆ 9.7 ಎಕರೆ, ಮಂಟನಕುರ್ಚಿ ಬಳಿ ಗುರುದೇವ ಸಂಸ್ಥೆ ‘ಸಮಾಧಾನ’ ಆಶ್ರಮದವರಿಗೆ 3 ಎಕರೆ ಜಮೀನು ಮಂಜೂರು.
  • ಬೆಳಗಾವಿ ತಾಲೂಕು ಬಾಗೇವಾಡಿ ಬಳಿ ಕಿತ್ತೂರು ರಾಣಿ ಚನ್ನಮ್ಮ ವಿವಿಗೆ 87.31 ಎಕರೆ ಜಮೀನು ಮಂಜೂರು.
  • ಗುರುಕುಲ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿ ನಿಲಯ ಕಟ್ಟಲು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ರಿಯಾಯಿತಿ ದರದಲ್ಲಿ ನಿವೇಶನ.
  • ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ 453 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿರುವ ಎಸ್.ಎಂ.ಕೃಷ್ಣ ನಗರ ವಸತಿ ಬಡಾವಣೆಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ 15.34 ಕೋಟಿ ರೂ. ಅನುದಾನ.
  • ಮೈಸೂರು ನಗರದಲ್ಲಿ ಎಲ್​ಇಡಿ ಬೀದಿ ದೀಪ ಅಳವಡಿಸಲು ಪಿಪಿಪಿ ಮಾದರಿ. ಏಳು ವರ್ಷಗಳ ಗುತ್ತಿಗೆ ದರ 109 .91ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ.
  • ಆಗರ ಕೆರೆಯಿಂದ 35 ಎಂಎಲ್​ಡಿ ನೀರಿನ ಜತೆಗೆ 15 ಎಂಎಲ್​ಡಿ ಹೆಚ್ಚುವರಿ ನೀರನ್ನು ಆನೇಕಲ್ ಯೋಜನೆಗೆ ಹರಿಸಲು ಪೈಪ್​ಲೈನ್ ಜೋಡಣೆ ಮಾಡುವ 30 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಅನುಮೋದನೆ.
  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 27.73 ಕೋಟಿ ರೂ. ವೆಚ್ಚದಲ್ಲಿ ಉಪಕರಣ ಹಾಗೂ 24.90 ಕೋಟಿ ರೂ. ವೆಚ್ಚದಲ್ಲಿ ಔಷಧ ಖರೀದಿಗೆ ಅನುಮೋದನೆ.
  • ಎಸ್ಕಾಂಗಳ ಆರ್ಥಿಕ ಏರುಪೇರು ಸರಿದೂಗಿಸುವ ಹಿನ್ನೆಲೆಯಲ್ಲಿ 5,575 ಕೋಟಿ ರೂ. ಸಾಲ ಪಡೆಯಲು ಸರ್ಕಾರದ ಖಾತ್ರಿ.
  • 2020-2025 ಪ್ರವಾಸೋದ್ಯಮ ನೀತಿ ತಾಂತ್ರಿಕವಾಗಿ ಒಪ್ಪಿಗೆ, ಸೆ. 27ರ ಪ್ರವಾಸೋದ್ಯಮ ದಿನದಂದು ಬಿಡುಗಡೆ.
  • ಸಂಡೂರು ತಾಲೂಕು ದೋಣಿ ಮಲೈ ಭಾಗದಲ್ಲಿ 600 ಹೆ.ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಗೆ ತೀರ್ವನ.
  • ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ವಿದ್ಯಾಶಿಲ್ಪ ವಿಶ್ವವಿದ್ಯಾಲಯ ವಿಧೇಯಕ-2020ಕ್ಕೆ ಅನುಮೋದನೆ.
  • ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ-2020ಕ್ಕೆ ಒಪ್ಪಿಗೆ.
  • ತುಮಕೂರು ಕ್ಯಾತಸಂದ್ರ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬದಲು ಮೇಲ್ಸೇತುವೆ ನಿರ್ಮಾಣ ಮಾಡಲು ತೀರ್ವನ.
  • ದೆಹಲಿಯಲ್ಲಿ ಕರ್ನಾಟಕ ನಿರ್ವಣದ ಅನುದಾನ 89 ಕೋಟಿ ರೂ. ನಿಂದ 120 ಕೋಟಿ ರೂ.ಗೆ ಹೆಚ್ಚಿಸಲು ಸಮ್ಮತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net