

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ಅಡಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಸಂಪುಟ ಉಪ ಸಮಿತಿ ರಚಿಸಲಾಗಿದೆ. ನೂತನ ರಾಜ್ಯ ಸರ್ಕಾರ ಇತ್ತೀಚೆಗೆ ಉಪ ಸಮಿತಿ ನೇಮಿಸಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯನ್ನು ಸಮಿತಿಯಿಂದ ಕೈಬಿಟ್ಟಿದೆ.
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ವಿಶೇಷ ಸ್ಥಾನ ಕಲ್ಪಿಸಿದ್ದು, ಆಳುವ ಸರ್ಕಾರಗಳು ಅನುಷ್ಠಾನದಲ್ಲಿ ಹಿಂದೆ ಬಿದ್ದಿವೆ. ಸಮಿತಿ ನೇಮಕವಾದರೂ ಈ ಭಾಗದ ಬೇಡಿಕೆಗಳು, ವಿಶೇಷ ಸೌಲಭ್ಯ ಅನುಷ್ಠಾನದಲ್ಲಿ ಆಗುತ್ತಿರುವ ಕಾನೂನು ತೊಡಕುಗಳು, ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಗಳು ಮಾಡುವ ಎಡವಟ್ಟುಗಳು ನಿವಾರಣೆಯಾಗುತ್ತಿಲ್ಲ.
ಇದನ್ನೂ ಓದಿ: ಮಕ್ಕಳ ಸಾವು ತಡೆಗೆ ಕ್ರಮ- ಸಚಿವ ಶಿವರಾಜ ತಂಗಡಗಿ ಹೇಳಿಕೆ
ಮುಖ್ಯವಾಗಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಸೌಲಭ್ಯಕ್ಕಾಗಿ ವಿಧಿ ಅವಕಾಶ ಕಲ್ಪಿಸಿದ್ದು, ಶಿಕ್ಷಣ ರಂಗದಲ್ಲಿ ಈ ಭಾಗದ ವಿದ್ಯಾರ್ಥಿಗಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ. ಉನ್ನತ, ತಾಂತ್ರಿಕ ಶಿಕ್ಷಣ ಕೈಗೆಟುಕುವಂತಾಗಿದೆ.
ಆದರೆ, ಉದ್ಯೋಗದಲ್ಲಿ ಕೆಳ ಹಂತದ ಹುದ್ದೆಗಳಲ್ಲಿ ನೇಮಕಾತಿಗಳು ಸುಗಮವಾದರೆ, ಪ್ರಮುಖ ಹುದ್ದೆಗಳ ನೇಮಕಾತಿಯಲ್ಲಿ ತೊಡಕುಗಳು ಸಾಮಾನ್ಯವಾಗಿವೆ. ಪ್ರತಿಯೊಂದು ನೇಮಕಾತಿಯಲ್ಲಿ ಏನಾದರೊಂದು ತಪ್ಪುಗಳಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆ ವರ್ಷಗಟ್ಟಲೇ ಮುಂದೂಡಲ್ಪಡುತ್ತಿದೆ.
ಸರ್ಕಾರ, ಸಂಪುಟ ಉಪ ಸಮಿತಿ ಹಾಗೂ ಕಕ ಭಾಗದ ಶಾಸಕ, ಸಚಿವರು ಈ ಬಗ್ಗೆ ಗಮನ ನೀಡಬೇಕಿದೆ. ಪ್ರತಿ ಬಾರಿ ಅನ್ಯಾಯವಾದಾಗಲೂ ಜನಪ್ರತಿನಿಧಿಗಳು ಸರಿಪಡಿಸುವ ಅಥವಾ ಈ ಬಗ್ಗೆ ಧ್ವನಿ ಎತ್ತುವ ಗೋಜಿಗೆ ಹೋಗದಿರುವುದು ದುರದೃಷ್ಟದ ಸಂಗತಿ. ಮತ್ತೊಂದೆಡೆ ಕಲ್ಯಾಣ ಕರ್ನಾಟಕವೆಂದರೆ ಕೇವಲ ಕಲಬುರ್ಗಿ ಎಂಬಂತಾಗಿದೆ. ಬಾಕಿ ಆರು ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವರ್ಷಕ್ಕೆ ಇಂತಿಷ್ಟು ಅನುದಾನ ನೀಡುವುದು ಬಿಟ್ಟರೆ ಬೇರೆ ಪ್ರಗತಿಗಳಾಗುತ್ತಿಲ್ಲ. ನೂತನ ರಾಜ್ಯ ಸರ್ಕಾರ 371(ಜೆ) ಸಂಪುಟ ಉಪ ಸಮಿತಿ ರಚಿಸಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಉಳಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕ್ರೀಡಾ ಸಚಿವ ಬಿ.ನಾಗೇಂದ್ರ ಹಾಗೂ ಯೋಜನಾ ಸಚಿವ ಡಿ.ಸುಧಾಕರ ಅವರನ್ನು ಸದಸ್ಯರನ್ನಾಗಿಸಿದೆ.
ಕಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆಯುತ್ತಲೇ ಬಳ್ಳಾರಿಯಿಂದ ವಿಭಜನೆಯಾಗಿದ್ದ ಹರಪನಳ್ಳಿಯನ್ನು ಸರ್ಕಾರ ಮತ್ತೆ ಬಳ್ಳಾರಿಗೆ ಸೇರಿಸಿದೆ. ಅದರಂತೆ ಬೇರೆ ಬೇರೆ ಜಿಲ್ಲೆಗಳ ಗಡಿ ಗ್ರಾಮಗಳನ್ನು ಸೇರಿಸುವ ಹುನ್ನಾರ ಮೊದಲಿನಿಂದಲೂ ನಡೆಯುತ್ತಿದೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಕೆ.ಪಾಟೀಲ್ ಅವರು ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿದ್ದಾಗ ಕೊಪ್ಪಳ ಜಿಲ್ಲೆ ಗಡಿ ಭಾಗಕ್ಕೆ ಹೊಂದಿಕೊಂಡ ಗದಗ ಜಿಲ್ಲೆಯ 24 ಹಳ್ಳಿಗಳನ್ನು ಕೊಪ್ಪಳಕ್ಕೆ ಸೇರಿಸಿ ವಿಶೇಷ ಸ್ಥಾನಮಾನ ಕೊಡಿಸವ ಚರ್ಚೆಯೂ ನಡೆದು ಅನುಮೋದನೆ ಪಡೆಯುವ ಹಂತಕ್ಕೆ ಹೋಗಿತ್ತು. ಆಗ ಬಸವರಾಜ ರಾಯರಡ್ಡಿ ಅವರು ಸಮಿತಿಯಲ್ಲಿದ್ದರೂ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಬಳಿಕ ಜನಾಕ್ರೋಶ ವ್ಯಕ್ತವಾಗುತ್ತಲೇ ಚರ್ಚೆ ಕೈ ಬಿಡಲಾಯಿತು.
ಕಕ ಭಾಗವೆಂದರೆ ಕೇವಲ ಕಲಬುರ್ಗಿ ಬಿಟ್ಟರೆ ರಾಯಚೂರು ಎಂಬಂತಾಗಿದೆ. ಉಳಿದ ಜಿಲ್ಲೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ. ಅದು ಈಗಲೂ ಮುಂದುವರಿದಂತಿದೆ. ಸಂಪುಟ ಉಪ ಸಮಿತಿಯಲ್ಲಿ ಕಾನೂನು, ಯೋಜನೆ ಸಂಬಂಧಿ ವಿಷಯಗಳು ಪ್ರಮುಖವಾಗಿರುವುದರಿಂದ ಕಾನೂನು ಹಾಗೂ ಯೋಜನಾ ಸಚಿವರು ಇರಬೇಕಾಗುತ್ತದೆ.
ಯೋಜನಾ ಸಚಿವರನ್ನು ಸೇರಿಸಿರುವ ಸರ್ಕಾರ ಕಾನೂನು ಸಚಿವ ಎಚ್.ಕೆ.ಪಾಟೀಲರನ್ನು ಸಮಿತಿಯಿಂದ ಕೈ ಬಿಟ್ಟಿದೆ. ಕಕ ಭಾಗದ ಜಿಲ್ಲೆಗಳ ಸಚಿವರನ್ನು ಸಮಿತಿಯಲ್ಲಿ ಸೇರಿಸಿದ್ದರೂ ಕೊಪ್ಪಳ ಜಿಲ್ಲೆಯ ಸಚಿವ ಶಿವರಾಜ ತಂಗಡಗಿ ಅವರನ್ನು ಕೈ ಬಿಟ್ಟಿದ್ದು, ಜಿಲ್ಲೆಯನ್ನು ಕಡೆಗಣಿಸಲಾಗಿದೆ.
371(ಜೆ) ಸಮಪರ್ಕ ಅನುಷ್ಠಾನಕ್ಕಾಗಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಅದರಲ್ಲಿ ಕಕ ಭಾಗದ ಸಚಿವರು ಹಾಗೂ ಯೋಜನೆ ಮತ್ತು ಕಾನೂನು ಸಚಿವರು ಇರಬೇಕು. ಇದರಿಂದ ಅನುಕೂಲವಾಗಲಿದೆ. ಕಾನೂನು ಸಚಿವರನ್ನು ಸೇರಿಸಬೇಕು.| ರಜಾಕ ಉಸ್ತಾದ್, ಹೈಕ ಹೋರಾಟ ಸಮತಿ ಉಪಾಧ್ಯಕ್ಷ, ರಾಯಚೂರು 371(ಜೆ) ಸಂಪುಟ ಉಪ ಸಮಿತಿಯಲ್ಲಿ ನನ್ನನ್ನು ಸೇರಿಸಿಲ್ಲ. ಹಾಗಂತ ಕಡೆಗಣಿಸಿದ್ದಾರೆಂದು ಅರ್ಥ ಅಲ್ಲ. ನನ್ನನ್ನು ವಿವಿಧ ನಿಗಮ, ಮಂಡಳಿ ಹಾಗೂ ಐಸಿಸಿ ಸಭೆ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಕೆಲಸವೂ ಹೆಚ್ಚಿದೆ. ಹೀಗಾಗಿ ಬಿಟ್ಟಿರಬಹುದು.| ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ.