ಸಂಪುಟ ವಿಸ್ತರಣೆ ಮತ್ತಷ್ಟು ತಡ; ಇನ್ನೂ ಹೈಕಮಾಂಡ್ ಕೇಳಿಲ್ಲ ಬಿಎಸ್​ವೈ; ಷಾಗೆ ಸೋಂಕು

BSY SHA
Published on

ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನಷ್ಟು ದಿನ ತಡವಾಗುವುದು ಖಚಿತವಾಗಿದ್ದು, ಇದರಿಂದಾಗಿ ಆಕಾಂಕ್ಷಿಗಳಲ್ಲಿ ನಿರಾಸೆ ಉಂಟಾಗಿದೆ.

ಮುಂದಿನ ವಾರದ ಕೊನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿ ಪಡೆದು ಬರಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಹೈಕಮಾಂಡ್ ಸಹ ಸಂಪುಟ ಪುನಾರಚನೆ ಉದ್ದೇಶ ಹೊಂದಿದೆ ಎಂದೇ ಬಿಜೆಪಿಯಲ್ಲಿ ವದಂತಿ ಹರಿದಾಡುತ್ತಿದ್ದವು. ಆದರೆ, ಲಭ್ಯ ಮಾಹಿತಿ ಪ್ರಕಾರ ಇದುವರೆವಿಗೂ ಹೈಕಮಾಂಡ್ ಮುಂದೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಪ್ರಸ್ತಾಪವನ್ನೇ ಯಡಿಯೂರಪ್ಪ ಮಂಡಿಸಿಲ್ಲ. ಹೈಕಮಾಂಡ್ ಕಡೆಯಿಂದಲೂ ಅಂತಹ ಯಾವುದೇ ಸೂಚನೆ ಇಲ್ಲ ಎನ್ನಲಾಗಿದೆ.

ರಾಜ್ಯದಲ್ಲಿಯೂ ಕರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಅದರ ನಿಯಂತ್ರಣ ಸರ್ಕಾರದ ಆದ್ಯತೆ ಆಗಬೇಕೇ ಹೊರತು ಸಂಪುಟ ವಿಸ್ತರಣೆಯಲ್ಲ ಎಂಬುದು ಹೈಕಮಾಂಡ್​ನಲ್ಲಿ ಕೆಲ ನಾಯಕರ ಅಭಿಪ್ರಾಯವಾಗಿದೆ ಎಂಬ ಮಾಹಿತಿಯೂ ರಾಜ್ಯ ನಾಯಕರಿಗೆ ಲಭ್ಯವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಗುಣಮುಖರಾಗಿ ಬರುವ ತನಕ ಹೈಕಮಾಂಡ್​ನಲ್ಲಿ ಪ್ರಮುಖ ತೀರ್ವನವನ್ನು ಯಾರೊಬ್ಬರೂ ತೆಗೆದುಕೊಳ್ಳುವುದಿಲ್ಲ. ಇದು ಸಹ ಯಡಿಯೂರಪ್ಪ ಸದ್ಯಕ್ಕೆ ದೆಹಲಿಗೆ ಹೋಗದಿರುವ ನಿರ್ಧಾರಕ್ಕೆ ಬರಲು ಕಾರಣವೆನ್ನಲಾಗಿದೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಗಣೇಶ ಚೌತಿಯ ನಂತರವೇ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ರಾಜ್ಯ ಬಿಜೆಪಿ ಮೂಲಗಳ ಪ್ರಕಾರ ಸದ್ಯಕ್ಕೆ ಮೂರರಿಂದ ನಾಲ್ಕು ಜನರನ್ನು ಮಾತ್ರ ಸಂಪುಟಕ್ಕೆ ಸೇರಿಸಲಾಗುತ್ತದೆ. ಡಿಸೆಂಬರ್​ಗೆ ಸಂಪುಟ ಪುನಾರಚನೆ ಎಂದು ಹೇಳಲಾಗುತ್ತಿದೆ. ಆದರೆ ಕೆಲ ಶಾಸಕರು ಈಗಲೇ ಪುನಾರಚನೆಗೆ ಪಟ್ಟು ಹಿಡಿದಿದ್ದಾರೆ. ಐದರಿಂದ ಆರು ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ. ವರಿಷ್ಠರನ್ನು ಯಡಿಯೂರಪ್ಪ ಭೇಟಿ ಮಾಡಿದ ನಂತರವೇ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಅಂತಿಮವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net