

ಜೈಪುರ : ರಾಜಸ್ತಾನದ ಕಾಂಗ್ರೆಸ್ ಸರ್ಕಾರದ ಸಂಭಾವ್ಯ ಸಂಪುಟ ವಿಸ್ತರಣೆಯು ಜುಲೈ 28 ರಂದು ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವು ದಿನಗಳು ಜೈಪುರದಲ್ಲೇ ಇರಬೇಕಾಗಿ ಪಕ್ಷದ ಶಾಸಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜಸ್ತಾನ ಘಟಕದ ಉಸ್ತುವಾರಿ ಅಜಯ್ ಮಕೇನ್ ಇಂದು ಪಕ್ಷದ ಶಾಸಕರು ಮತ್ತು ಪ್ರದೇಶ ಕಾಂಗ್ರೆಸ್ ಕಮಿಟಿಯ ಸದಸ್ಯರನ್ನು ಭೇಟಿ ಮಾಡಿದರು. ಸಿಎಂ ಅಶೋಕ್ ಗೆಹ್ಲೋತ್ ಅವರನ್ನೂ ಭೇಟಿ ಮಾಡಲಿರುವ ಈ ನಾಯಕರು, ನಂತರ ದೆಹಲಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಂಜಾಬ್ ಸಿಎಂ ಮತ್ತು ಸಿಧು ನಡುವೆ ಶಾಂತಿ ಘೋಷಣೆ?!
ಸಂಪುಟ ವಿಸ್ತರಣೆಗಾಗಿ ಇಂದೇ ಶಾಸಕರ ಸಭೆ ನಡೆಯುವುದೆಂಬ ಊಹೆಗಳಿದ್ದವು. ಅದಕ್ಕಾಗಿ ಮಾಜಿ ಡೆಪ್ಯುಟಿ ಸಿಎಂ ಸಚಿನ್ ಪೈಲಟ್ರನ್ನು ಆಹ್ವಾನಿಸಿಲ್ಲ ಎಂದು ಮುಖಂಡರಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು ಎನ್ನಲಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೊತಸರ ಅವರು, ಶಾಸಕರ ಸಭೆ ನಿಗದಿಯಾಗಿರಲಿಲ್ಲ. ದೆಹಲಿಯ ನಾಯಕರ ಸ್ವಾಗತ ಕಾರ್ಯಕ್ರಮಕ್ಕಾಗಿ ಶಾಸಕರನ್ನು ಕರೆಯಲಾಗಿತ್ತು ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಬಣವು ಸಚಿವ ಸಂಪುಟ ವಿಸ್ತರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಅಸಮಾಧಾನ ಹೊಂದಿದ್ದು, ಈ ಬಗ್ಗೆ ಸಿಎಂ ಗೆಹ್ಲೋತ್ ಬಣದೊಂದಿಗೆ ವಾಕ್ಸಮರದಲ್ಲಿ ತೊಡಗಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)