ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ?

CM
Published on

ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನದ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಭೇಟಿ ನೀಡುತ್ತಿದ್ದು, ಮೂರು ದಿನ ಅಲ್ಲೇ ಬಿಡಾರ ಹೂಡಲಿದ್ದಾರೆ. ಕೇಂದ್ರದ ವಿವಿಧ ಸಚಿವರನ್ನು ಭೇಟಿಯಾಗಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಕಾಲಾವಕಾಶ ಪಡೆಯಬೇಕಾಗಿದೆ.

ತಾತ್ಪೂರ್ತಿಕ ಪ್ರವಾಸ ಪಟ್ಟಿ ಪ್ರಕಾರ ಕಲಬುರಗಿಯಲ್ಲಿ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಪಾಲ್ಗೊಂಡು, ಮಧ್ಯಾಹ್ನ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದು, 19ರವರೆಗೆ ದೆಹಲಿಯಲ್ಲಿಯೇ ಇರಲಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಸಿಎಂ ಜತೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ತೆರಳಲಿದ್ದು, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರವೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಪ್ರಕಾಶ ಜಾವಡೇಕರ್ ಜತೆಗೆ ಚರ್ಚೆ, ನೆರೆ ಪರಿಹಾರ ಕಾರ್ಯಕ್ಕೆ ಹೆಚ್ಚಿನ ನೆರವು, ವಿವಿಧ ಯೋಜನೆಗಳಿಗೆ ತ್ವರಿತವಾಗಿ ಅಸ್ತು, ಸಾಲ ಪಡೆಯುವುದಕ್ಕೂ ಸಮ್ಮತಿ ಪಡೆಯುವುದು ಪ್ರವಾಸದ ಪ್ರಧಾನ ಕಾರ್ಯಸೂಚಿಗಳಾಗಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆಂದು ಹೆಚ್ಚುವರಿ 1 ದಿನ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕರ್ನಾಟಕ ಭವನದ ನೂತನ ಕಟ್ಟಡಕ್ಕೆ 18ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಂಸದರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ರ್ಚಚಿಸಿ, ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಒತ್ತಾಸೆಯಾಗಿ ನಿಲ್ಲುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ವಿಲ್ಸನ್​ಗಾರ್ಡನ್​ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ ಮೃತಪಟ್ಟಿದ್ದು ಕೊವಿಡ್​-19ನಿಂದ ಅಲ್ಲ…

ಒಲವಿಗೆ ತಕ್ಕಂತೆ ನಡೆ: ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಸಂಪುಟದಲ್ಲಿ ಖಾಲಿಯಿರುವ 6ರಲ್ಲಿ 4 ಸ್ಥಾನಗಳನ್ನು ತುಂಬುವುದು ಬಿಎಸ್​ವೈ ಇಚ್ಚೆಯಾಗಿದೆ. ಹೀಗಾಗಿ ಶತಾಯಗತಾಯ ವರಿಷ್ಠರ ಮನವೊಲಿಸಿ ಒಪ್ಪಿಗೆ ಪಡೆಯಲೇಬೇಕೆಂಬ ನಿರ್ಧಾರಕ್ಕೆ ಬಂದಿರುವುದು 3 ದಿನಗಳ ದೆಹಲಿಗೆ ಬಿಡಾರವೇ ಪುಷ್ಟಿ ನೀಡುತ್ತದೆ.

ಅಧಿವೇಶನದ ಬಳಿಕ ವಿಸ್ತರಣೆ?: ಸಚಿವ ಸಂಪುಟಕ್ಕೆ ನಾಲ್ವರನ್ನು ಸೇರಿಸಿಕೊಂಡು, ಉಳಿದ 2 ಸ್ಥಾನಗಳನ್ನು ಭುಗಿಲೇಳುವ ಅಸಮಾಧಾನ ತಮಣಿಗೆ ಕಾದಿಡಲು ಸಿಎಂ ಯೋಚಿಸಿದ್ದಾರೆ. ವರಿಷ್ಠರು ಅಸ್ತು ಎಂದರೂ ವಿಧಾನ ಮಂಡಲದ ಮುಂಗಾರು ಅಧಿವೇಶನದ ಬಳಿಕ ವಿಸ್ತರಣೆಗೆ ಮಹೂರ್ತ ನಿಗದಿಯಾಗಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳು 6, ಆಕಾಂಕ್ಷಿಗಳು 2 ಡಜನ್​ಗೂ ಅಧಿಕ. ಯಾರನ್ನೇ ಮಂತ್ರಿ ಮಾಡಿದರೂ ಅತೃಪ್ತಿ ಕಟ್ಟಿಟ್ಟ ಬುತ್ತಿ. ಅಧಿವೇಶನದ ಹೊತ್ತಲ್ಲಿ ಸಂಪುಟ ವಿಸ್ತರಿಸಿದರೆ ಜೇನು ಗೂಡಿಗೆ ಕಲ್ಲು ಹೊಡೆದಂತಾಗುತ್ತದೆ. ಬಿಎಸ್​ವೈ ಸಂಪೂರ್ಣ ಹಿಡಿತವಿದ್ದರೂ ಅನಪೇಕ್ಷಣೀಯ ಬೆಳವಣಿಗೆಗೆ ಲಗಾಮು ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net