ಕಾಲುವೆಗಳ ಆಧುನೀಕರಣಕ್ಕೆ ಸಚಿವ ಸಂಪುಟ ಅನುಮೋದನೆ

Published on

ಮದ್ದೂರು: ಪಟ್ಟಣದ ಕೆರೆ ವ್ಯಾಪ್ತಿಯಲ್ಲಿ ಬರುವ ಬೈರಾನ್ ಹಾಗೂ ವೈದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ್ಮಾಕ ಅನುಮೋದನೆ ದೊರೆತಿದೆ.

ಶಾಸಕ ಕೆ.ಎಂ.ಉದಯ್ ಅವರು ಮದ್ದೂರು ಕೆರೆ ವ್ಯಾಪ್ತಿಯಲ್ಲಿ ಬರುವ ಬೈರಾನ್ ನಾಲೆ ಹಾಗೂ ವೈದ್ಯನಾಥಪುರ ಕಾಲುವೆಗಳು ಪಟ್ಟಣದ ಹೃದಯ ಭಾಗದಲ್ಲಿ ಇರುವ ಕಾರಣ ಹಲವು ವರ್ಷಗಳಿಂದ ನಾಲೆಗಳ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದ್ದು, ಹೂಳಿನಿಂದ ಆವರಿಸಿದ್ದ ಕಾರಣ ನಾಲೆಯ ನೀರು ಸರಾಗವಾಗಿ ಹರಿಯುತ್ತಿರಲ್ಲಿಲ್ಲ. ಅಲ್ಲದೆ ಒಳಚರಂಡಿ ನೀರು ಸೇರುತ್ತಿರುವ ಪರಿಣಾಮ ದೊಡ್ಡ ಚರಂಡಿಗಳಾಗಿ ಮಾರ್ಪಟ್ಟಿದ್ದವು.

ಹೀಗಾಗಿ ಶಾಸಕ ಕೆ.ಎಂ.ಉದಯ್ ಅವರ ಸತತ ಪರಿಶ್ರಮ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಿ ಬೈರಾನ್ ಹಾಗೂ ವೈದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 49.50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ಕೊಡಿಸುವಲ್ಲಿ ಶಾಸಕ ಉದಯ್ ಯಶಸ್ವಿಯಾಗಿದ್ದಾರೆ.

ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿರುವ ಕೆಮ್ಮಣ್ಣು ನಾಲೆಯನ್ನು 90 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕೆಲವು ತಿಂಗಳುಗಳಲ್ಲಿ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಡೆಯುತ್ತಿದೆ.

ಜು.28 ರಂದು ಮದ್ದೂರಿನಲ್ಲಿ ನಡೆದ ಸಾಧನಾ ಸಮಾವೇಶ ಮತ್ತು 1146 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಎಂ.ಉದಯ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದ್ದೂರಿಗೆ ಮೆಟ್ರೋ, ಏರ್‌ಪೋರ್ಟ್ ಏನು ಬೇಡ ರೈತರಿಗೆ ನೀರಾವರಿ ಯೋಜನೆ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಮನವಿ ಮಾಡಿದ್ದರು.

ಹೀಗಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಅನುಮೋದನೆ ನೀಡಿದ್ದು, ಶಾಸಕ ಕೆ.ಎಂ.ಉದಯ್ ಅವರು ಸಿಎಂ ಮತ್ತು ಡಿಸಿಎಂ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net