

ಬೆಂಗಳೂರು: ಸಿ.ಎಂ. ಇಬ್ರಾಹಿಂ ಪ್ರಕರಣದಲ್ಲಿ ಮುಸ್ಲಿಂ ಧರ್ಮ ಗುರುಗಳ ಒಂದು ಗುಂಪು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರೆ, ಇನ್ನೊಂದು ಗುಂಪು ಕಾಂಗ್ರೆಸ್‌ನಲ್ಲೇ ಉಳಿಯುವಂತೆ, ಅಲ್ಲೇ ಹೋರಾಡುವಂತೆ ಸಿ.ಎಂ.ಇಬ್ರಾಹಿಂ ಮನವೊಲಿಸಲು ಯತ್ನಿಸಿದೆ.
ಈ ನಡುವೆ ತಮ್ಮ ಬಲ ಹೆಚ್ಚಿಸಿಕೊಳ್ಳಲು ಇಬ್ರಾಹಿಂ ಸುತ್ತಾಟ ತೀವ್ರಗೊಳಿಸಿದ್ದು, ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದಾರೆ. ವಿಧಾನಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್. ಪಾಟೀಲ್ ಬಳಿಕ ಸೋಮವಾರ ಮಾಜಿ ಗೃಹ ಸಚಿವ ರೋಷನ್ ಬೇಗ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಪ್ರಸ್ತುತ ರೋಷನ್ ಬೇಗ್ ಕಾಂಗ್ರೆಸ್‌ನಲ್ಲಿ ಇಲ್ಲವಾದರೂ ಅವರು ಸಕ್ರಿಯ ರಾಜಕಾರಣಕ್ಕೆ ಬರಲು ಅವಕಾಶಕ್ಕೆ ಕಾಯುತ್ತಿದ್ದಾರೆ. ಇದೇ ವೇಳೆ ಇಬ್ರಾಹಿಂ ಜತೆಗೂಡಿ ಚರ್ಚೆ ನಡೆಸಿರುವುದು ಅಲ್ಪಸಂಖ್ಯಾತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಪ್ರದೇಶದಲ್ಲಂತೂ ರೋಷನ್ ಬೇಗ್ ಹಳೆಯ ಹುಲಿ. ರಾಜಕೀಯವಾಗಿ ಹಿನ್ನೆಡೆಯಾದರೂ ರಾಜಕೀಯ ಪಟ್ಟುಗಳನ್ನು ಅರಿತವರು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಇಬ್ರಾಹಿಂ ಜತೆಗೆ ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ಮಾತನಾಡಿದ್ದೇನೆ, ನನ್ನ ಮುಂದಿನ ನಡೆ ಶೀಘ್ರದಲ್ಲೇ ಪ್ರಕಟಿಸುತ್ತೇನೆ, ನೋಡುತ್ತಿರಿ ಎಂದು ಶಿವಾಜಿ ನಗರ ಮಾಜಿ ಶಾಸಕ, ಮಾಜಿ ಗೃಹ ಸಚಿವ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನಾಗಿ ಕಾಂಗ್ರೆಸ್ ತೊರೆದಿದ್ದಲ್ಲ, ಕಾಂಗ್ರೆಸ್ ಬಿಡಲು ನಾನು ಸಿದ್ಧನಿರಲಿಲ್ಲ. ಸಿದ್ಧರಾಮಯ್ಯರನ್ನು ಟೀಕಿಸಿದೆ ಎಂಬ ಕಾರಣಕ್ಕೆ ಅಮಾನತು ಮಾಡಿಸಿದರು ಎಂದ ಅವರು ರಾಜಕೀಯ ಮರುಹುಟ್ಟಿಗಾಗಿ ಜೆಡಿಎಸ್ ಬಾಗಿಲು ತಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಯ ಬಂದಾಗ ತಿಳಿಸುವೆ ಎಂದು ಗುಟ್ಟು ಬಾಕಿ ಇಟ್ಟರು.