

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಸೆ.17ರಿಂದ ಅ.2ರ ಗಾಂಧಿ ಜಯಂತಿವರೆಗೆ ಜಿಲ್ಲೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪಕ್ಷದ ಜೌಕಟ್ಟು ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಸಹಯೋಗದಲ್ಲಿ ಇದನ್ನು ಸೇವಾ ಪಾಕ್ಷಿಕವೆಂದು ಆಚರಿಸಲಾಗುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಸೇವಾ ಪಾಕ್ಷಿಕದ ಮೂಲಕ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಹಸಿರೀಕರಣ, ಕರೊನಾ ಬೂಸ್ಟರ್ ಡೋಸ್ ದೊರಕಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ಪುಸ್ತಕದ ರೂಪದಲ್ಲಿ ಮಾಹಿತಿ ಒದಗಿಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೋದಿ ಜನ್ಮದಿನದ ಅಂಗವಾಗಿ ನಗರದ ಕುವೆಂಪು ಮಂದಿರದಲ್ಲಿ ಸೆ.17ರ ಬೆಳಗ್ಗೆ 11.30ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ 1,020 ಅಂಗವಿಕಲ ಫಲಾನುಭವಿಗಳಿಗೆ ಒಟ್ಟು 1,746 ಸಲಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ, ನಗರಾಧ್ಯಕ್ಷ ಜಗದೀಶ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಮೇಯರ್ ಸುನೀತಾ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಸಿ.ಎಚ್.ಮಾಲತೇಶ್, ಹೃಷಿಕೇಶ್ ಪೈ, ಎನ್.ಡಿ.ಸತೀಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.