ಜಿಲ್ಲೆಯಲ್ಲಿ ಮುಂದುವರಿದ ಅಭಿವೃದ್ಧಿ ಪರ್ವ: ಬಿವೈಆರ್

byr
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದ್ದು, ಹೈವೆ, ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ ಆಗುಂಬೆವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವಾಗಿ ಮೇಲ್ದರ್ಜೆಗೇರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ದೊರೆತಿದೆ. ಭಾರತೀಪುರ ಸಮೀಪ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಮಾರ್ಗ (766-ಸಿ)ದ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 35 ಕಿಮೀ ಬೈಪಾಸ್ ನಿರ್ಮಾಣ ಮಾಡಲಾಗುವುದು. ಇದರಿಂದ ಕೊಲ್ಲೂರು ಸಂಪರ್ಕದ ಪ್ರಯಾಣ ಅವಧಿ ಕಡಿಮೆಯಾಗಲಿದೆ. ಶಿಕಾರಿಪುರದಲ್ಲೂ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಸರಳೀಕರಣ, ಜಿಲ್ಲೆಯ 81 ಹಳ್ಳಿಗಳಿಗೆ ಮೊಬೈಲ್ ನೆಟ್‌ವರ್ಕ್ ಒದಗಿಸುವ ಬಗ್ಗೆ, ಭದ್ರಾವತಿಯ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ, ಬಿದನೂರು ಕೋಟೆ, ಶಿಕಾರಿಪುರದ ಉಡುಗಣಿ ಅಭಿವೃದ್ಧಿಗೆ ಮನವಿ ನೀಡಲಾಗಿದೆ. ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಬಿವೈಆರ್ ತಿಳಿಸಿದರು. ಶಿವಮೊಗ್ಗ ಹೊರವಲಯದ ತ್ಯಾವರೆಚಟ್ನಹಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವ ಸಂಬಂಧ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ ಎಂದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ವ್ಯಾಪಕವಾಗಿರುವುದರಿಂದ ಕೆಳದಿ ಶಿವಮೊಗ್ಗ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಮೂಲಕ ಮೆಕ್ಕೆಜೋಳ ಕುರಿತು ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ಸಂಶೋಧನಾ ಕೇಂದ್ರ ಆರಂಭಿಸಲು ಪ್ರಯತ್ನ ನಡೆದಿದೆ. ಸುಮಾರು 100 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಕೇಂದ್ರದ ಅಧಿಕಾರಿಗಳ ತಂಡ ಈಗಾಗಲೇ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net