

ಶಿವಮೊಗ್ಗ: ಮುಂಬರುವ ದಿನಗಳಲ್ಲಿ ಶಿವಮೊಗ್ಗ ನಗರವು ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕ ಹೊಂದಲಿದೆ ಎಂದು ಲೋಕಸಭಾ ಸದಸ್ಯಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಗಾಣಿಗ ಸಮಾಜದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿಮಾನ ನಿಲ್ದಾಣ ಉದ್ಘಾಟನೆಯಾಗಿ ಎರಡು ವರ್ಷ ಸಮೀಪಿಸುತ್ತಿದೆ. ಪ್ರಸ್ತುತ ಹಲವು ರಾಜ್ಯಗಳಿಗೆ ವಿಮಾನ ಸಂಪರ್ಕ ಲಭಿಸಿದೆ. ಪ್ರತಿ ದಿನ 12 ವಿಮಾನ ಮಾರ್ಗಗಳಲ್ಲಿ ಸಂಚಾರವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನಯಾನ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗಾಣಿಗ ಸಮುದಾಯ ಭವನಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ವಿಳಂಬದಿಂದ ಅನುದಾನ ವಾಪಸ್ ಹೋಗಿದೆ. ಈಗ ರಾಜ್ಯ ಸರ್ಕಾರ 50 ಲಕ್ಷ ರೂ.ಗೂ ಅಧಿಕ ಅನುದಾನ ನೀಡಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸಬೇಕು. ಶಾಸಕ ಬಿ.ಕೆ.ಸಂಗಮೇಶ್ವರ್ ಪ್ರಯತ್ನ ಮಾಡಬೇಕು. ಗಾಣಿಗ ಸಮುದಾಯ ಭವನಕ್ಕೆ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗಾಣಿಗ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರದಲ್ಲಿ ನನ್ನ ತಾಯಿ ಹೆಸರಲ್ಲೂ ಧನ ಸಹಾಯ ಮಾಡುತ್ತೇನೆ. ಗಾಣಿಗ ಸಮುದಾಯ ವೀರಶೈವ ಸಮಾಜದ ಒಂದು ಸಣ್ಣ ಪಂಗಡವಾಗಿದೆ. ಇದರ ಅಭಿವೃದ್ಧಿಗೆ ಬೇಕಾದ ಎಲ್ಲ ನೆರವು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಜಿ.ವಿಜಯಕುಮಾರ್, ಸತೀಶ್, ಬಿಂದು ವಿಜಯಕುಮಾರ್ ಇತರರಿದ್ದರು.