ಉಪ ಚುನಾವಣೆ: 3 ಕ್ಷೇತ್ರಗಳ ಸರಾಸರಿ ಮತದಾನ ಶೇ.81.84| 3 constituencies is 81.84 percent

Vote
Published on

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಉಪ ಚುನಾವಣೆ(Bye-election) ಯಲ್ಲಿ ಯಾವುದೇ ಗದ್ದಲ, ಗೊಂದಲವಿಲ್ಲದೆ ಶಾಂತಿಯುತ ಮತದಾನವಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.88.80, ಶಿಗ್ಗಾಂವಿಯಲ್ಲಿ ಶೇ.80.48 ಹಾಗೂ ಸಂಡೂರಿನಲ್ಲಿ ಶೇ.76.24ರಷ್ಟು ಮತದಾನವಾಗಿದೆ.

ಮೂರು ಕ್ಷೇತ್ರಗಳಲ್ಲೂ ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕುಗಳನ್ನು ಚಲಾಯಿಸಿದರು. ನ.23ರಂದು ಹೊರಬೀಳುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಾಗೂ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಅದಲು-ಬದಲು ಆರೋಪ

ಚನ್ನಪಟ್ಟಣ ತಾಲೂಕು ಹೊಂಗನೂರಿನ ಮತಗಟ್ಟೆ 4ರಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಅ)ಕ್ಕೆ ಅಂಟಿಸಿರುವ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಲಾಗಿದೆ ಎಂಬ ದೂ ರು ಕೇಳಿ ಬಂದಿತ್ತು. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತಗಟ್ಟೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅಂತಹ ಯಾವುದೇ ಗೊಂದಲಗಳು ಆಗಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ವೆಬ್ ಕ್ಯಾಸ್ಟಿಂಗ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲ್ಲ 276 ಮತಗಟ್ಟೆಗಳಲ್ಲೂ ಚುನಾವಣಾ ಆಯೋಗ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಿತ್ತು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ 121, ಸಂಡೂರು ವಿಧಾನಸಭಾ ಕ್ಷೇತ್ರದ 127 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7.30ರ ವೇಳೆಗೆ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಲ್ಲಿ ನಿಂತಿದ್ದರು. ಮಧ್ಯಾಹ್ನ ವೇಳೆ ಮತದಾನದ ಪ್ರಮಾಣವು ಮಂದಗತಿಯಲ್ಲಿತ್ತು. ಸಂಜೆಯಾಗುತ್ತಿದ್ದಂತೆ ಮತದಾನ ಬಿರುಸುಗೊಂಡಿತ್ತು.

ಮತದಾರರಿಗೆ ಅಗತ್ಯ ಸೌಲಭ್ಯ

ಮತಗಟ್ಟೆಗಳಲ್ಲಿ ಮತದಾರರಿಗೆ ನೀರು, ನೆರಳು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ವಯಸ್ಕರಿಗೆ ಹಾಗೂ ವಿಶೇಷಚೇತನರಿಗೆ ವೀಲ್‌ಚೇರ್, ಸಹಾಯಕರ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲೆಲ್ಲಿ ಮತ ಎಣಿಕೆ?:

ನ.23 ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ರಾಮನಗರ ಜಿಲ್ಲೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸಂಡೂರು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಬಳ್ಳಾರಿ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net