ಬಿ.ವೈ ವಿಜಯೇಂದ್ರ ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ; ಪೈಪೋಟಿ ನೀಡಿದ್ದ ಅಭ್ಯರ್ಥಿಗೆ ಮಣೆ

IMG-20230824-WA0017
Published on

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರಗೆ ತೀವ್ರ ಪೈಪೋಟಿ ನೀಡಿದ್ದ ನಾಗರಾಜ ಗೌಡ ಗುರುವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಾಜ ಗೌಡರನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡರು.

ವಿಧಾನಸಭೆ ಚುನಾವಣೆಯಲ್ಲಿ ನಾಗರಾಜಗೌಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿದ್ದ ಗೋಣಿ‌ ಮಾಲತೇಶ್‌ಗೆ ಟಿಕೆಟ್ ಸಿಕ್ಕಿತ್ತು. ನಾಗರಾಜ ಗೌಡ ಪಕ್ಷೇತರರಾಗಿ ಕಣಕ್ಕಿಳಿದರು.

ಚುನಾವಣೆಯಲ್ಲಿ ವಿಜಯೇಂದ್ರ 81,810 ಮತ ಪಡೆದರೆ, ನಾಗರಾಜ ಗೌಡ 70,802 ಮತ ಗಳಿಸಿ ತೀವ್ರ ಪೈಪೋಟಿ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಳಿಸಿದ್ದು ಕೇವಲ 8,101‌ ಮತ. ವಿಜಯೇಂದ್ರ 11,008 ಮತಗಳಿಂದ ಗೆದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವಿಜಯೇಂದ್ರರನ್ನು ಕ್ಷೇತ್ರದಲ್ಲಿ ಕಟ್ಟಿಹಾಕುವ ಉದ್ದೇಶದಿಂದ ನಾಗರಾಜ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದೆ.

ಈ ಮೂಲಕ ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲೆ ಬಲಗೊಳಿಸಿ ಈಗಿನಿಂದಲೇ ತಯಾರಿ ನಡೆಸಿರುವ ಮುನ್ಸೂಚನೆ ಸಿಕ್ಕಿದೆ. ವಿಜಯೇಂದ್ರ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಗಮನ‌‌ನೀಡುತ್ತಿರುವಾಗ ಕಾಂಗ್ರೆಸ್ ನಡೆ ಮಹತ್ವ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net