ನಾವು ಜೀವಿಸುವ ರೀತಿಯಿಂದ ಸತ್ತ ಮೇಲೂ ಬದುಕಿರಬಹುದು!

Untitled design (3)
Published on
‘ಜಾತಸ್ಯ ಮರಣಂ ಧ್ರುವಂ’ ಎಂಬ ಮಾತಿನಂತೆ ಹುಟ್ಟಿದವನಿಗೆ ಮರಣವೆಂಬುದು ಶತಸಿದ್ಧ. ಸಾವೇ ಬೇಡವೆಂದಾದರೆ, ಹುಟ್ಟಲೇಬಾರದು, ಚಿಗುರೆಲೆ ಚಿಗುರಬೇಕಾದರೆ, ಹಣ್ಣೆಲೆ ಉದುರಲೇಬೇಕು. ಇದು ಪ್ರಕೃತಿ ನಿಯಮ. ಬಂದವರೆಲ್ಲಾ ಮರಳಿ ಹೋಗದೆ ಉಳಿದುಬಿಟ್ಟರೆ, ಹೊಸದಾಗಿ ಬರುವವರಿಗೆ ಜಾಗ ಎಲ್ಲಿದೆ? ಜನನ- ಜೀವನ- ಮರಣ- ಇದು ಈ ಜಗತ್ತಿಗೆ ಬರುವ ಎಲ್ಲ ಜೀವಿಗಳೂ ಹಾದುಹೋಗಲೇಬೇಕಾದ ಅವಸ್ಥೆಗಳು. ತನಗೆ ಪ್ರಾಪ್ತವಾಗಿರುವ ಜೀವನಾವಧಿಯನ್ನು ಮುಗಿಸಿದ ಮೇಲೆ ಎಂತಹ ಧನವಂತನೂ ನಿಧನವಾಗುತ್ತಾನೆ. ಎಂತಹ ಹಣವಂತನೂ ಹೆಣವಾಗುತ್ತಾನೆ. ಹಲವರ ಹೆಣವನ್ನು ಸುಟ್ಟವನೂ ಹೆಣವಾಗಿ, ಜನರು ಅವನ ಹೆಣವನ್ನೂ ಸುಡುತ್ತಾರೆ. ನೂರಾರು ರೋಗಿಗಳ ಜೀವನವನ್ನು ಉಳಿಸಿದ ವೈದ್ಯನೂ ಒಂದು ದಿನ ಸಾಯುತ್ತಾನೆ. ಇದು ಜಗದ ನಿಯಮ.

ಮರಣ ಎಂದರೆ, ಜೀವಾತ್ಮ ನಮ್ಮ ದೇಹವನ್ನು ತೊರೆದುಹೋಗುವ ಜೀವಿಗಳಿಗೆಲ್ಲಾ ಅನಿವಾರ್ಯವಾದ ಒಂದು ಪ್ರಕ್ರಿಯೆ. ಈ ಜಗತ್ತಿನಲ್ಲಿ ನಾವು ಬದುಕಿರುವವರೆಗೆ ಮಾತ್ರ ನಮಗೊಂದು ಸ್ಥಾನಮಾನ. ಸತ್ತ ಮೇಲೆ, ನಮ್ಮ ಹೆಣವನ್ನು ಮುಟ್ಟಿದರೂ ಜನರು ಮಾಡಿಕೊಳ್ಳುವರು ತಲೇ ಸ್ನಾನ. ಜೀವನದಲ್ಲಿದ್ದಾಗ ‘ಹೇಗಿರುವಿ?’ ಎಂದು ವಿಚಾರಿಸದವರು ಸತ್ತಮೇಲೆ ‘ಹೇಗೆ ಸತ್ತ?’ ಎಂದು ಕೇಳುತ್ತಿರುತ್ತಾರೆ. ನಾವು ಸತ್ತಮೇಲೆ, ಹೆಚ್ಚಿನವರ ನೆನಪಿನಲ್ಲಿ ನಾವು ಕೆಲದಿನಗಳವರೆಗೆ ಮಾತ್ರ ಉಳಿಯುತ್ತೇವೆ. ಇನ್ನು ತೀರ ಹತ್ತಿರದವರ ನೆನಪಿನಲ್ಲಿ ಕೆಲ ವರುಷಗಳವರೆಗೆ ನಿಂತರೆ ಎಲ್ಲರೂ ಮರೆಯಾಗುತ್ತಾರೆ. ನಾವೂ ಎಲ್ಲವನ್ನೂ ಮರೆತುಬಿಡುತ್ತೇವೆ. ಮನುಷ್ಯನ ಮಿದುಳಿಗೆ ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿ ಸಾಮರ್ಥ್ಯವಿದ್ದಂತೆ, ಮರೆಯುವ ಸಾಮರ್ಥ್ಯವೂ ಇದೆ.

ಇದು ದೇವರು ಕೊಟ್ಟ ವರವೆಂದೇ ತಿಳಿಯಬೇಕು. ಯಾವುದನ್ನೂ ಮರೆಯದೆ, ಸದಾ ನೆನಪಿಸಿಕೊಳ್ಳುತ್ತಿದ್ದೇವೆ ಎಂದರೆ, ಬದುಕಲೇ ಕಷ್ಟವಾದೀತು. ಹಳೆಯ ಕಟು ಘಟನೆಗಳನ್ನು ಮರೆತು, ಹೊಸ ಆಶೋತ್ತರಗಳೊಂದಿಗೆ ಬದುಕುವುದೇ ಜೀವಿಸುವ ಪರಿ. ಈ ಜಗತ್ತು ಅಷ್ಟೆ. ಎಲ್ಲವನ್ನೂ, ಎಲ್ಲರನ್ನೂ ಮರೆತು ಬಿಡುತ್ತದೆ. ಜೀವನವೆಂದರೆ, ಊಟಕ್ಕೆ ಮೊದಲು ಅದು, ಬಾಳೆ ಎಲೆ; ಊಟವಾದ ನಂತರ ಎಂಜಲು ಎಲೆ. ನಮ್ಮ ಜೀವನದಲ್ಲೂ ಅಷ್ಟೆ. ನಮ್ಮ ಅವಶ್ಯಕತೆ ಇರೋ ತನಕ ನಾವು ಎಲ್ಲರಿಗೂ ಬೇಕು. ಅವಶ್ಯಕತೆ ಮುಗಿದ ಬಳಿಕ ನಾವು ಕೂಡಾ ಯಾರಿಗೂ ಬೇಡವಾದ ಒಂದು ಎಂಜಲು ಎಲೆ. ತಾತ್ಪರ್ಯ ಇಷ್ಟೆ. ಈ ಜಗತ್ತಿಗೆ ಯಾರೂ ಅನಿವಾರ್ಯವಲ್ಲ! ತನ್ನನ್ನು ಬಿಟ್ಟು ಈ ಜಗತ್ತು ಇರಲಾರದು ಎಂದುಕೊಂಡವರ ಸಮಾಧಿಗಳಿಂದಲೇ ಸ್ಮಶಾನವು ತುಂಬಿದೆ. ಹೀಗೆ ಸತ್ತವರ ಪೈಕಿ, ಹೆಚ್ಚಿನವರು ಶಾಶ್ವತವಾಗಿ ಮರೆಯಾಗುತ್ತಾರೆ.

ಆದರೆ, ಕೆಲವರು ದೈಹಿಕವಾಗಿ ಸತ್ತುಹೋಗಿದ್ದರು, ಜನಮಾನಸದಲ್ಲಿ ಶಾಶ್ವತವಾಗಿ ಉಳಿದು, ಸತ್ತಮೇಲೂ ಬದುಕಿರುತ್ತಾರೆ. ಸತ್ತಮೇಲೂ ಬದುಕಿರಬೇಕಾದರೆ - ಜೀವನದಲ್ಲಿರುವಾಗ, ಸತ್ಕಾರ್ಯ, ಸಮಾಜ ಸೇವೆ, ದೇಶ ಸೇವೆಗಳನ್ನು ಮಾಡಬೇಕು. ಈ ಕಾರಣದಿಂದಲೇ ನಮ್ಮ ಹಿರಿಯರು, ಜನಸಾಮಾನ್ಯರಿಗಾಗಿ, ಸಸಿಗಿಡಗಳನ್ನು ನೆಟ್ಟರು; ಕುಡಿಯಲು ನೀರಿಗಾಗಿ ಕೆರೆಗಳನ್ನು ಕಟ್ಟಿದರು. ಬಾವಿಗಳನ್ನು ತೋಡಿದರು; ಆಸ್ಪತ್ರೆಗಳನ್ನು- ಶಾಲೆಗಳನ್ನು- ಅನಾಥಾಶ್ರಮಗಳನ್ನು ಸ್ಥಾಪಿಸಿದರು. ದೇಶಕ್ಕಾಗಿ ಪ್ರಾಣ ತೆತ್ತರು. ತನ್ಮೂಲಕ, ಸತ್ತಮೇಲೂ ಜನರ ಮನಸ್ಸಿನಲ್ಲಿ ಮಹಾತ್ಮರಾಗಿ, ಹುತಾತ್ಮರಾಗಿ ಉಳಿದರು, ಈ ಸತ್ಯವನ್ನೇ ನಾನು ಹೀಗೆ ಬರೆದೆ: ‘ನಾವು ಸತ್ತಮೇಲೆ ನಮ್ಮ ಬಟ್ಟೆಬರೆ, ಬಡಬಗ್ಗರ ಪಾಲು, ನಮ್ಮ ಆಸ್ತಿ ಪಾಸ್ತಿ, ನಗನಾಣ್ಯ ಮಡದಿ ಮಕ್ಕಳ ಪಾಲು, ನಮ್ಮ ದೇಹ ಅಗ್ನಿ ಪಾಲು, ನಮ್ಮ ಅಸ್ತಿ ಗಂಗೆ ಪಾಲು, ಮಗ ಹಾಕಿದ ಪಿಂಡ ಕಾಗೆಗಳ ಪಾಲು; ದಕ್ಷಿಣೆ ಪುರೋಹಿತರ ಪಾಲು; ಭೂರಿ ಭೋಜನ ಬಂಧು ಮಿತ್ರರ ಪಾಲು; ಆದರೆ ನಾವು ಮಾಡಿದ ಪರೋಪಕಾರ, ನಾವು ಗೈದ ಸತ್ಕಾರ್ಯ, ಸಮಾಜಸೇವೆ-ಇದು ಮಾತ್ರ ನಮ್ಮ ಪಾಲು ಇದರಲ್ಲಿ ಬೇರೆ ಯಾರಿಗೂ ಇಲ್ಲ್ಲ ಪಾಲು!’ ಆದುದರಿಂದ ಸಮಾಜ ಸೇವೆಯೇ ನಾವು ಸತ್ತಮೇಲೂ ಬದುಕಿರಬಹುದಾದ ರೀತಿ.

ಅಪ್ರತಿಮ ಕಲಾವಿದರೂ, ಸಂಗೀತಗಾರರೂ, ಸಾಹಿತಿಗಳೂ, ಸತ್ತಮೇಲೂ ಬದುಕಿರುತ್ತಾರೆ. ಸಾಹಿತಿಗೆ ಸಾವು ಇರಬಹುದು. ಆದರೆ, ಸಾಹಿತ್ಯಕ್ಕೆ ಸಾವು ಇಲ್ಲ. ಆದುದರಿಂದಲೇ ದಿವಂಗತರಾಗಿ ಶತಶತಮಾನಗಳೇ ಕಳೆದುಹೋದರೂ, ಶೇಕ್ಸ್​ಪಿಯರ್, ಮಿಲ್ಟನ್, ವರ್ಡ್ಸ್​ವರ್ತ್, ಕಾಳಿದಾಸನಂತಹ ಕವಿಗಳು ಮರೆಯದೆ ನಮ್ಮ ಮನಸ್ಸಿನಲ್ಲಿ ಉಳಿದಿದ್ದಾರೆ. ಬಸವಣ್ಣ ಪುರಂದರದಾಸ, ಕನಕದಾಸರಂತಹ ಚಿಂತಕರು, ದಾರ್ಶನಿಕರು, ನೆನಪಿನಲ್ಲಿದ್ದಾರೆ. ವಿವೇಕಾನಂದ, ಸಾವರ್ಕರ್ ನೇತಾಜಿಯಂತಹ ದೇಶಭಕ್ತರು ಇನ್ನೂ ಜೀವಂತವಾಗಿದ್ದಾರೆ. ಹೀಗೆ ನಾನಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಗೈದ ಸಾಧಕರನ್ನು, ಪಂಡಿತರನ್ನು, ವಿದ್ವಾಂಸರನ್ನು, ಯತಿವರೇಣ್ಯರನ್ನು ಮರೆಯಲು ಸಾಧ್ಯವುಂಟೇ? ಇವರಿಗೆ ಸಾವು ಎಂಬುದು ಉಂಟೇ? ಇಂತಹ ಮರೆಯಾದ ಮಹನೀಯರ ಪಟ್ಟಿಯಂತೂ ನಮ್ಮ ದೇಶದಲ್ಲಿ ಬಹಳ ದೊಡ್ಡದಾಗಿದೆ. ಇವರೆಲ್ಲರೂ ಸತ್ತಮೇಲೂ ಬದುಕಿರಲು ಸಾಧ್ಯವೆಂಬ ಸತ್ಯವನ್ನು ತೋರಿಸಿಕೊಟ್ಟವರು. ಅಂತೆಯೇ ಪಾಪಿಗಳೂ, ದುಷ್ಕರ್ವಿುಗಳೂ ಜನರ ಮನಸ್ಸಿನಿಂದ ಮರೆಯಾಗುವುದಿಲ್ಲ. ಆದರೆ, ಇಂತಹವರು ನಮಗೆ ಉದಾಹರಣೆಯಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net