

ಶೃಂಗೇರಿ: ರಾಜ್ಯದಲ್ಲಿ ಮುಕ್ತಿವಾಹನಗಳು ಮಹತ್ತರ ಸೇವೆ ಸಲ್ಲಿಸುತ್ತಿವೆ ಎಂದು ಕರ್ಣಾಟಕ ಬ್ಯಾಂಕ್ ಶಿವಮೊಗ್ಗ ಪ್ರಾಂತೀಯ ಮಹಾಪ್ರಬಂಧಕ ಎಚ್.ಎ.ನಾಗರಾಜ್ ಹೇಳಿದರು.
ರಾಜನಗರದ ವಿದ್ಯಾಭಾರತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಶಿವಳ್ಳಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಕೃಷ್ಣಮೂರ್ತಿ ಅವರಿಗೆ ಮುಕ್ತಿವಾಹನದ ಕೀ ಹಸ್ತಾಂತರಿಸಿ ಮಾತನಾಡಿದರು.
ಯಾವುದೇ ಸೇವೆಯನ್ನು ನಿಸ್ವಾರ್ಥದಿಂದ ಮಾಡಿದಾಗ ಮಾತ್ರ ಸಂಸ್ಥೆ ಸದಾ ಸಮಾಜದ ಮುಂಚೂಣಿಯಲ್ಲಿ ಇರಲು ಸಾಧ್ಯ. ಶಿವಳ್ಳಿ ಬ್ರಾಹ್ಮಣ ಮಹಾಸಭಾ ಸಮುದಾಯದ ಹಿತಕ್ಕಾಗಿ ಸತ್ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಮುಕ್ತಿವಾಹನದ ಸೇವೆ ಈಶ್ವರನಿಗೂ ಪ್ರಿಯವಾಗುತ್ತದೆ. ಸಮುದಾಯದ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಲಿ. ಬ್ಯಾಂಕ್ ಹಾಗೂ ಮಹಾಸಭಾದ ನಡುವಿನ ಬಾಂಧವ್ಯ ನಿರಂತರವಾಗಿರಲಿ ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್, ಶೃಂಗೇರಿ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಬಿ.ಎನ್.ಕಿರಣ್, ಸಂಘದ ಮಾಜಿ ಅಧ್ಯಕ್ಷ ಎಚ್.ಜಿ.ವಿವೇಕಾನಂದ, ಪ್ರಧಾನ ಕಾರ್ಯದರ್ಶಿ ಬಿ.ಜಿ.ಮುರಳೀಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ನಾಗಮಣಿ ಇತರರಿದ್ದರು.