ಮೂರು ಕ್ಷೇತ್ರ ಉಪಸಮರ ಶೀಘ್ರ ಮುಹೂರ್ತ ನಿಗದಿ? ಬಿಹಾರ ಚುನಾವಣೆ ಜತೆ ನಡೆಸಲು ಸಿದ್ಧತೆ

EVM
Published on

ಬೆಂಗಳೂರು: ಬಿಹಾರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಜತೆಗೆ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ತೆರವಾಗಿರುವ ವಿಧಾನಸಭೆ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಸಲು ಚುನಾವಣೆ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕರೊನಾ ಸಾಂಕ್ರಾಮಿಕ ರೋಗದ ಕಾರಣವೊಡ್ಡಿ ಬಿಹಾರ ಚುನಾವಣೆ ಮುಂದೂಡುವ ಪ್ರಯತ್ನಗಳನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು, ಕಾಲಮಿತಿಯೊಳಗೆ ಚುನಾವಣೆ ನಡೆಸುವುದಕ್ಕೆ ಹಸಿರು ನಿಶಾನೆ ತೋರಿಸಿದೆ. ಹೀಗಾಗಿ ಅಕ್ಟೋಬರ್-ನವೆಂಬರ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಇದಕ್ಕಾಗಿ ಮಾರ್ಗಸೂಚಿಯನ್ನು ಚುನಾವಣೆ ಆಯೋಗ ಈಗಾಗಲೇ ಪ್ರಕಟಿಸಿದೆ. ಇದೇ ವೇಳೆ ಖಾಲಿಯಿರುವ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ವೇಳಾಪಟ್ಟಿ ನಿಗದಿಪಡಿಸುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ 3 ಕ್ಷೇತ್ರ: ರಾಜ್ಯದ ಆರ್.ಆರ್.ನಗರ, ಮಸ್ಕಿ ಮತ್ತು ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭೆ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಯಬೇಕಿದೆ. ಆಪರೇಷನ್ ಕಮಲ ಕಾರ್ಯಾಚರಣೆ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಆರ್.ಆರ್.ನಗರದ ಮುನಿರತ್ನ ಹಾಗೂ ಮಸ್ಕಿಯ ಪ್ರತಾಪ ಗೌಡ ಪಾಟೀಲ್ ಸೇರಿದ್ದಾರೆ. ಸುಪ್ರೀಂ ಕೋರ್ಟ್ ಎಲ್ಲರ ರಾಜೀನಾಮೆ ಅಂಗೀಕರಿಸಿ ಮತ್ತೊಮ್ಮೆ ಜನಾದೇಶ ಪಡೆಯಲು ಸೂಚಿಸಿತ್ತು. ಮುನಿರತ್ನ ಮತ್ತು ಪ್ರತಾಪ ಗೌಡ ಪಾಟೀಲ್ ರಾಜೀನಾಮೆಗೂ ಮುನ್ನವೇ ಕಳೆದ ಚುನಾವಣೆ ಫಲಿತಾಂಶದ ಕುರಿತು ಸೋತ ಪ್ರತಿಸ್ಪರ್ಧಿಗಳು ಹೈಕೋರ್ಟ್​ನಲ್ಲಿ ತಕರಾರು ಸಲ್ಲಿಸಿದ್ದು, ಇತ್ಯರ್ಥಕ್ಕೆ ಕಾದಿವೆ.

3 ಪಕ್ಷಗಳಿಗೆ ಪ್ರತಿಷ್ಠೆ: ಉಪ ಚುನಾವಣೆ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಮುನಿರತ್ನ ಮತ್ತು ಪ್ರತಾಪ ಗೌಡ ಪಾಟೀಲ್ ವ್ಯಾಜ್ಯದಿಂದ ಮುಕ್ತವಾದರೆ, ವ್ಯಕ್ತಿಗತವಾಗಿ ಅವರಿಬ್ಬರಿಗೂ, ಬಿಜೆಪಿಗೂ ನಿರಾಳ. ಇಲ್ಲವಾದರೆ ಇಬ್ಬರೊಂದಿಗೆ ಬಿಜೆಪಿಯು ಕಾನೂನಿನ ಕಸರತ್ತು ನಡೆಸಬೇಕಾದ ಅನಿವಾರ್ಯತೆ ತಲೆದೋರಲಿದೆ.

ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸುವುದಕ್ಕೆ ಆಸಕ್ತರ ಸಂಖ್ಯೆ ಗಮನಾರ್ಹವಾಗಿದೆ. ಮಸ್ಕಿಯಲ್ಲಿ ಜೆಡಿಎಸ್​ಗೆ ಭದ್ರ ಬುನಾದಿ ಇಲ್ಲ. ಆದರೂ 3 ಪ್ರಮುಖ ಪಕ್ಷಗಳು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಲೆಂದು ಪೂರ್ವತಯಾರಿ ನಡೆಸಿವೆ.

ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದಲ್ಲಿ ಸ್ಪರ್ಧಾ ಕಣ ಬಾರಿ ವಿಭಿನ್ನವಾಗಿರಲಿದೆ. ಜೆಡಿಎಸ್ ವಶದಿಂದ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹವಣಿಸಿದ್ದರೆ, ಖಾತೆ ತೆರೆದು ತನ್ನ ಬಲ ವೃದ್ಧಿಸಿಕೊಳ್ಳುವ ಲೆಕ್ಕಾಚಾರ ಕಮಲ ಪಡೆಯದ್ದಾಗಿದೆ.

ಜೆಡಿಎಸ್ ನಿಂದ ಬಿ.ಸತ್ಯನಾರಾಯಣ ಅವರ ಪುತ್ರ, ತಾ.ಪಂ. ಮಾಜಿ ಅಧ್ಯಕ್ಷ ಸತ್ಯಪ್ರಕಾಶ, ಕಳೆದ ಬಾರಿಯ ಟಿಕೆಟ್ ಆಕಾಂಕ್ಷಿ ಸಿ.ಆರ್.ಉಮೇಶ್ ಹೆಸರುಗಳು ಚಾಲ್ತಿಯಲ್ಲಿದ್ದು, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಒಲವು-ನಿಲುವು ಯಾರ ಪರವಾಗಿದೆ ಎನ್ನುವುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಂದ್ರಗೌಡ ಹೆಸರುಗಳು ಕೇಳಿ ಬರುತ್ತಿದ್ದು, ಅಧಿಸೂಚನೆ ಪ್ರಕಟವಾದ ಬಳಿಕ ತಿರುವು ಪಡೆಯಲಿದೆ.

ಬಿಜೆಪಿಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತ ಎಸ್.ಆರ್.ಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸುರೇಶ ಗೌಡ ಹೆಸರುಗಳು ಕಾರ್ಯಕರ್ತರ ಮಧ್ಯೆ ಚರ್ಚೆಯಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಮಂತ್ರಿ ಜೆ.ಸಿ.ಮಾಧುಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಜಂಟಿಯಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜರಾಜೇಶ್ವರಿ ನಗರವೇ ಸಮಸ್ಯೆ: ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತುಳಸಿ ಮುನಿರಾಜು ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ನಿಗಮದ ಅಧ್ಯಕ್ಷ ಸ್ಥಾನ ಕೊಟ್ಟರೂ ಅವರು ಇದುವರೆವಿಗೂ ಅಧಿಕಾರ ಸ್ವೀಕಾರ ಮಾಡಿಲ್ಲ. ಉಪ ಚುನಾವಣೆ ನಡೆದರೆ ಪಕ್ಷದಿಂದ ಮುನಿರತ್ನ ಸ್ಪರ್ಧಿಸಿದರೆ ಪಕ್ಷೇತರರಾಗಿ ಕಣಕ್ಕೆ ಇಳಿಯುವುದಾಗಿಯೂ ಮುಖಂಡರಿಗೆ ತಿಳಿಸಿದ್ದಾರೆಂದು ಮೂಲಗಳು ಖಚಿತ ಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net