

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಫ್ಯಾಕ್ಟರ್ ಹೇಗೆ ಪರಿಣಾಮ ಬೀರಬಹುದೆಂಬ ಆತಂಕ ಆಡಳಿತ ಪಕ್ಷ ಬಿಜೆಪಿಯನ್ನು ಕಾಡಲಾರಂಭಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈ ಎರಡೂ ಕ್ಷೇತ್ರಗಳ ಗೆಲುವು ದಿಕ್ಸೂಚಿಯಾಗಬಹುದಾದ ಸಾಧ್ಯತೆ ಜತೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿಗೂ ನಿಜವಾದ ಆಗ್ನಿಪರೀಕ್ಷೆ ಆಗಿರುವುದರಿಂದ ಅಳೆದೂ ತೂಗಿ ಬಿಜೆಪಿ ವರಿಷ್ಠರು ಯೋಜನೆ ರೂಪಿಸುತ್ತಿದ್ದಾರೆ. ಹಾನಗಲ್ ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರದ ಪಕ್ಕದ ಕ್ಷೇತ್ರವಾಗಿದ್ದರೆ, ಸಿಂದಗಿಯಲ್ಲಿ ಬಿಎಸ್ವೈ ಪ್ರಭಾವ ಸಾಕಷ್ಟಿದೆ. ಮುಖ್ಯಮಂತ್ರಿ ಹುದ್ದೆಗೆ ತಾವೇ ಸ್ವತಃ ರಾಜೀನಾಮೆ ನೀಡಿದ್ದಾಗಿ ಯಡಿಯೂರಪ್ಪ ಹೇಳಿಕೊಂಡರೂ ಪಕ್ಷದ ಮತದಾರರು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ರಾಜೀನಾಮೆ ಸಂದರ್ಭದಲ್ಲಿ ಬಿಎಸ್ವೈ ಕಣ್ಣೀರು ಹಾಕಿದ್ದಾರೆ. ಅವರ ಪುತ್ರ ವಿಜಯೇಂದ್ರಗೂ ಸಂಪುಟದಲ್ಲಿ ಅವಕಾಶ ನೀಡಿಲ್ಲ. ಸ್ವತಂತ್ರವಾಗಿ ರಾಜ್ಯ ಪ್ರವಾಸಕ್ಕೂ ಅನುಮತಿ ನೀಡದೆ ಇಕ್ಕಟ್ಟಿಗೆ ಸಿಲುಕಿಸಲಾಗಿದೆ ಎಂಬ ಭಾವನೆ ಬಿಎಸ್ವೈ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಪಕ್ಷ ಹಾಗೂ ಸಂಘದ ಗಮನಕ್ಕೂ ಬಂದಿದೆ. ಆದ್ದರಿಂದಲೇ ಆತಂಕಗೊಂಡಿರುವ ಮುಖಂಡರು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಸಿಎಂ ಬೊಮ್ಮಾಯಿ ಅವರನ್ನು ಕರೆಸಿಕೊಂಡಿದ್ದ ಸಂಘದ ಮುಖಂಡರು ಉಪ ಚುನಾವಣೆ ಗೆಲ್ಲಲೇಬೇಕೆಂಬ ಟಾಸ್ಕ್ ಕೊಟ್ಟು ಕಳುಹಿಸಿದ್ದಾರೆ.
ಮುಖ್ಯಮಂತ್ರಿಗೆ ಅಗ್ನಿ ಪರೀಕ್ಷೆ: ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ಎದುರಿಸ ಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಣೆ ಮಾಡಿದ ಬೆನ್ನಲ್ಲೇ 2 ಉಪ ಚುನಾವಣೆ ಎದುರಾಗಿದೆ. ಇಲ್ಲಿ ಗೆದ್ದರೆ ಮಾತ್ರ ಕಾರ್ಯಕರ್ತರಿಗೆ ಅವರ ನಾಯಕತ್ವದ ಬಗ್ಗೆ ವಿಶ್ವಾಸ ಮೂಡುತ್ತದೆ. ಆದ್ದರಿಂದಲೇ ಅವರ ಪಾಲಿಗೆ ಇದು ಅಗ್ನಿ ಪರೀಕ್ಷೆ ಯಾಗಿದೆ ಎಂದು ಪಕ್ಷದಲ್ಲಿಯೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಹೋಬಳಿಗೊಬ್ಬ ಮಂತ್ರಿ ಚುನಾವಣೆ ಉಸ್ತುವಾರಿ: ಎರಡು ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಪಣ ತೊಟ್ಟಿರುವ ಬಿಜೆಪಿ ಹೋಬಳಿಗೊಬ್ಬ ಮಂತ್ರಿಯನ್ನು ಉಸ್ತುವಾರಿಗಾಗಿ ನೇಮಕ ಮಾಡಲಿದೆ. ಅವರೊಂದಿಗೆ ಶಾಸಕರು, ಮುಖಂಡರಿಗೂ ಜವಾಬ್ದಾರಿ ನೀಡಲಾಗುತ್ತದೆ. ದಸರಾ ಮುಗಿದ ಕೂಡಲೇ ಎಲ್ಲ ಮಂತ್ರಿಗಳು, ಶಾಸಕರು ತಮ್ಮ ಉಸ್ತುವಾರಿಯ ಕ್ಷೇತ್ರಗಳಲ್ಲಿ ಚುನಾವಣೆ ಮುಗಿಯುವ ತನಕ ಇರಬೇಕಾಗುತ್ತದೆ. ಜಾತಿವಾರು ಮುಖಂಡರನ್ನೂ ನಿಯೋಜಿಸಲಾಗುತ್ತದೆ.
ಭಾನುವಾರ ಕೋರ್ ಕಮಿಟಿ: ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಬಗ್ಗೆ ಎಲ್ಲಿ ಮತ್ತು ಹೇಗೆ ರೋಡ್ ಶೋ ನಡೆಸಬೇಕು? ಚುನಾವಣೆಯಲ್ಲಿ ಯಾವ ವಿಚಾರದ ಬಗ್ಗೆ ಮಾತನಾಡಬೇಕು? ಎಲ್ಲಿ ಬಹಿರಂಗ ಸಭೆ ಮಾಡಬೇಕು ಎಂಬುದನ್ನು ಅಂತಿಮಗೊಳಿಸಲಾಗುತ್ತದೆ. ಹಾಗೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್ಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುತ್ತದೆ.
ಅಭ್ಯರ್ಥಿಗಳಾರು?: ಹಾನಗಲ್ನಲ್ಲಿ ದಿವಂಗತ ಸಿ.ಎಂ. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸಿಂಧಗಿಯಿಂದ ಮಾಜಿ ಶಾಸಕ ರಮೇಶ ಭೂಸನೂರಮಠ ಅಥವಾ ಇತ್ತೀಚಿಗೆ ಪಕ್ಷಕ್ಕೆ ಬಂದಿರುವ ದಿವಂಗತ ಸಚಿವ ಬಿ.ಎಸ್. ಪಾಟೀಲ್ ಮನಗೂಳಿ ಪುತ್ರ ಸೋಮನಗೌಡ ಅಲಿಯಾಸ್ ಅಪು್ಪಗೌಡ ಮನಗೂಳಿ ಅವರನ್ನು ಕರೆತಂದು ಟಿಕೆಟ್ ಕೊಡಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಇವರು ಕಳೆದ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಕೆಲವೇ ಮತಗಳ ಅಂತರದಿಂದ ಶಿವಾನಂದ ಪಾಟೀಲ್ ಎದುರು ಪರಾಭವಗೊಂಡಿದ್ದರು.
ಸೇವಾ ಸಮರ್ಪಣೆ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಹುದ್ದೆಯ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದು 20 ವರ್ಷ ಆದ ಹಿನ್ನೆಲೆಯಲ್ಲಿ ನಡೆದಿರುವ ಸೇವಾ ಸಮರ್ಪಣೆ ಕಾರ್ಯಕ್ರಮವನ್ನು ಅ.7ಕ್ಕೆ ದೊಡ್ಡ ಪ್ರಮಾಣದಲ್ಲಿ ನಡೆಸಲು ಬಿಜೆಪಿ ಉದ್ದೇಶಿಸಿದೆ. ಭಾನುವಾರದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಪರಿಷತ್ಗೂ ತಂತ್ರ: ಉಪ ಚುನಾವಣೆ ಜತೆಗೆ ಮುಂದಿನ ದಿನಗಳಲ್ಲಿ ಬರಲಿರುವ ವಿಧಾನ ಪರಿಷತ್ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆ ಸಿದ್ಧತೆ ಬಗ್ಗೆಯೂ ರ್ಚಚಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಇದುವರೆಗೆ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ. ಈ ಬಾರಿ 15 ರಿಂದ 20 ಸ್ಥಾನ ಗೆಲ್ಲುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ವೈಗೆ ಮಣೆ: ಯಡಿಯೂರಪ್ಪ ಅವರನ್ನು ಬಿಟ್ಟು ಉಪ ಚುನಾವಣೆ ಎದುರಿಸುವುದು ಕಷ್ಟವಾಗಬಹುದೆಂಬ ಮಾಹಿತಿ ಇರುವುದರಿಂದಲೇ ಅವರ ಮಾತಿಗೆ ಮನ್ನಣೆ ನೀಡುವುದಕ್ಕೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಬಿಎಸ್ವೈ ಬೆಂಬಲಿಗರಾದ ಎಂ.ಪಿ. ರೇಣುಕಾಚಾರ್ಯ, ಡಿ.ಎನ್. ಜೀವರಾಜ್ ಅವರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಆ ಮೂಲಕ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಪಕ್ಷದಲ್ಲಿ ವಿಶ್ಲೇಷಿಸಲಾಗುತ್ತಿದೆ. ಬೊಮ್ಮಾಯಿ ಶಾಸಕರೊಂದಿಗೆ ರ್ಚಚಿಸಿರುವುದು ಒಂದು ರೀತಿಯಲ್ಲಿ ಯಡಿಯೂರಪ್ಪ ಅವರಿಗೆ ಇರುವ ಅಸಮಾಧಾನ ತಣಿಸುವುದಕ್ಕೆಂದೇ ಹೇಳಲಾಗುತ್ತಿದೆ. ಸರ್ಕಾರದಲ್ಲಿ ಕಡತಗಳ ಚಲನೆಯೇ ಇಲ್ಲವೆಂದು ಅನೇಕ ಶಾಸಕರು ಯಡಿಯೂರಪ್ಪ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತಾವು ಇನ್ನೊಂದು ಶಕ್ತಿಕೇಂದ್ರವಾಗಲು ಇಷ್ಟಪಡುವುದಿಲ್ಲ. ಶಿಕಾರಿಪುರ ಬಿಟ್ಟು ಬೇರೆ ಕ್ಷೇತ್ರದ ಬಗ್ಗೆ ಮಾತನಾಡುವುದಿಲ್ಲ ಎಂದು ಮಾರ್ವಿುಕವಾಗಿ ಹೇಳಿಕೆ ನೀಡಿದ್ದರು. ಅದು ತಿಳಿದೇ ಈಗ ಶಾಸಕರನ್ನು ಕರೆದು ಅಭಿವೃದ್ಧಿಗೆ ಅನುದಾನ ಬಿಡುಗಡೆಯ ಭರವಸೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಎಂದು ಪಕ್ಷದಲ್ಲಿ ಚರ್ಚೆಯಾಗುತ್ತಿದೆ.
ಅಧ್ಯಯನಕ್ಕಾಗಿ ತಂಡ: ಹಾನಗಲ್, ಸಿಂದಗಿಯಲ್ಲಿ ಪಕ್ಷದ ಪರಿಸ್ಥಿತಿ ಏನಿದೆ, ಎದುರಾಳಿಗಳ ಸಾಮರ್ಥ್ಯ ಏನು ಎಂಬ ಬಗ್ಗೆ ಅಧ್ಯಯನಕ್ಕೆ ತಂಡ ಕಳುಹಿಸಲಾಗಿದೆ. ಆ ತಂಡಗಳು ನೀಡಲಿರುವ ವರದಿಯನ್ನು ಕೋರ್ ಸಮಿತಿ ಸಭೆಯಲ್ಲಿಟ್ಟು ಚರ್ಚೆ ಮಾಡಲಾಗುತ್ತದೆ. ಆ ವರದಿಗೆ ತಕ್ಕಂತೆ ಕಾರ್ಯತಂತ್ರ ರೂಪುಗೊಳ್ಳಲಿದೆ.
ಯಡಿಯೂರಪ್ಪ ಜತೆಯೇ ಉಪ ಚುನಾವಣೆ ಪ್ರಚಾರ: ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಚುನಾವಣೆಗೆ ಹೋದರೆ ಕಷ್ಟ ಎಂಬುದನ್ನು ಅರಿತಿರುವ ಪಕ್ಷದ ಮುಖಂಡರು ಅವರನ್ನು ಜತೆಗಿಟ್ಟುಕೊಂಡೇ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿಯೂ ಕನಿಷ್ಠ 3 ದಿನ ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಚರ್ಚೆ ನಡೆದಿದೆ. ಆದರೆ ಬಿಎಸ್ವೈ ಜತೆ ಈವರೆಗೆ ಯಾರೂ ರ್ಚಚಿಸಿಲ್ಲ. ವಿಜಯೇಂದ್ರಗೂ ಒಂದು ಕ್ಷೇತ್ರದ ಉಸ್ತುವಾರಿ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.