ಉಪ ಚುನಾವಣೆ; ಆಯೋಗ ಕಟ್ಟೆಚ್ಚರ, ವ್ಯಾಪಕ ಭದ್ರತೆ

k54g681_eci_625x300_27_October_23.jpg
Published on

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಉಪ ಚುನಾವಣಾ ಕಣ ರಂಗೇರಿದೆ. ಕದನ ಕಲಿಗಳು ಪರಸ್ಪರ ಅಬ್ಬರಿಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಗರೆಯುತ್ತಿದ್ದಾರೆ.

ಈ ನಡುವೆ ಚುನಾವಣಾ ಆಯೋಗ ಕೂಡ ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಿದೆ. ಚನ್ನಪಟ್ಟಣ ಮತ್ತು ಸಂಡೂರು ಹೈಟೆನ್ಶನ್ ಕ್ಷೇತ್ರಗಳಾಗಿರುವುದರಿಂದ ಶಾಂತಿಯುತ ಚುನಾವಣೆಗಾಗಿ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಸೆಂಟ್ರಲ್ ಪ್ಯಾರಾಮಿಲಿಟರಿಯ 18 ತುಕಡಿ ನಿಯೋಜನೆ ಮಾಡಲಾಗಿದೆ. ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆಗಿಳಿದಿವೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಸಿಬ್ಬಂದಿ ಜತೆಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮೂರೂ ಕ್ಷೇತ್ರಗಳಲ್ಲಿ ಈವರೆಗೆ ನಗದು, ಮದ್ಯ, ಡ್ರಗ್ಸ್ ಸೇರಿ 3.50 ಕೋಟಿ ಮೌಲ್ಯದ ಉಡುಗೊರೆ ವಶಕ್ಕೆ ಪಡೆಯಲಾಗಿದೆ.

ಶಿಗ್ಗಾವಿ ಮತ್ತು ಚನ್ನಪಟ್ಟಣ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ಇರುವ ಕಾರಣ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಹಾಗಾಗಿ ಹಾವೇರಿ ಮತ್ತು ರಾಮನಗರ ಪೂರ್ಣ ಜಿಲ್ಲೆಗಳಲ್ಲಿ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಪೊಲೀಸರು, ಅಬಕಾರಿ ಪೊಲೀಸರು, ಅರಣ್ಯ, ವಾಣಿಜ್ಯ ಅಧಿಕಾರಿಗಳ ಕಣ್ಗಾವಲು ತಂಡಗಳು ಕಟ್ಟೆಚ್ಚರವಹಿಸಿವೆ.

ಇವಿಎಂ/ವಿವಿ ಪ್ಯಾಟ್ ಸಿದ್ಧ

ಇವಿಎಂ ಮತ್ತು ವಿ.ವಿ.ಪ್ಯಾಟ್‌ಗಳು ಈಗಾಗಲೇ ಆಯಾ ವಿಧಾನಸಭಾ ಕ್ಷೇತ್ರ ತಲುಪಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಗಿದೆ. ಚುನಾವಣಾ ಆಯೋಗ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಈಗಾಗಲೇ ಸಭೆ ನಡೆಸಿ ನೀತಿ ಸಂಹಿತೆಯ ಕುರಿತು ಮಾಹಿತಿ ನೀಡಿದೆ. ಪೊಲಿಂಗ್ ಆಫೀಸರ್ ಮತ್ತು ಪ್ರಿಸೈಡಿಂಗ್ ಆಫೀಸರ್, ಮತಗಟ್ಟೆ ಸಿಬ್ಬಂದಿಗೆ ಈಗಾಗಲೇ ಮತದಾನ ಪ್ರಕ್ರಿಯೆ ಕುರಿತು ತರಬೇತಿ ನೀಡಲಾಗಿದೆ.

ಮನೆಗೆ ತೆರಳಿ ಮತದಾನ

80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದಲೇ ಈ ಪ್ರಕ್ರಿಯೆ ಚಾಲನೆಯಲ್ಲಿದ್ದು, ನ.8ರ ವರೆಗೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಬ್ಯಾಲೆಟ್ ಪೇಪರ್‌ಗಳನ್ನು ಮನೆಗೆ ಕೊಂಡೊಯ್ದು ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ಮತದಾನಕ್ಕೆ ಪೂರಕವಾಗಿ ಜಿಲ್ಲಾ ಆಡಳಿತಗಳಿಂದ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net