

ಮುಂಬೈ: ಭಾರತದಲ್ಲಿ 2021ರ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 82 ಸಾವಿರ ರೂ. ಆಗುವ ಸಾಧ್ಯತೆ ಇರುವುದಾಗಿ ಚಿನಿವಾರ ಪೇಟೆಯ ತಜ್ಞರು ಭವಿಷ್ಯ ನುಡಿದಿದ್ದಾರೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆ ತಲ್ಲಣಗೊಂಡಿದೆ. ಭವಿಷ್ಯದಲ್ಲಿ ಅದು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಗಿ ಬೀಳಲಿದ್ದಾರೆ. ತತ್ಪರಿಣಾಮ ಚಿನ್ನದ ಬೆಲೆ ಗಗನವನ್ನು ಸೀಳಿಕೊಂಡು ಹೋಗಲಿದೆ ಎಂದು ಹೇಳಿದ್ದಾರೆ.
ಗುರುವಾರದ ಚಿನಿವಾರ ಪೇಟೆಯ ವಹಿವಾಟು ಅಂತ್ಯಕ್ಕೆ 10 ಗ್ರಾಂ ಚಿನ್ನಕ್ಕೆ 46,352 ರೂ. ದರ ನಿಗದಿಯಾಗಿತ್ತು. ಇದರ ಅರ್ಥ, ಕೇವಲ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಶೇ.75 ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗೋಲ್ಡ್ಮ್ಯಾನ್ ಸ್ಯಾಚ್ಸ್ ಎಂಬ ಮತ್ತೊಂದು ಜಾಗತಿಕ ಸಂಸ್ಥೆಯ ತಜ್ಞರ ಪ್ರಕಾರ ಹಳದಿ ಲೋಹದ ಮೇಲಿನ ಹೂಡಿಕೆ ಹೆಚ್ಚ ಲಾಭ ತಂದುಕೊಡಲಿದೆ. ಕಚ್ಚಾ ತೈಲದ ಮೇಲಿನ ಹೂಡಿಕೆಗಿಂತಲೂ ಇದು ಆಕರ್ಷಣೀಯವಾಗಿ ಕಾಣುತ್ತಿದೆ ಎಂದು ಹೇಳಿದೆ.
ಕಾಕತಾಳೀಯ ಎಂಬಂತೆ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಪಾತಾಳಕ್ಕೆ ಕುಸಿಯಲಿದೆ ಎಂದು ಇದೇ ಗೋಲ್ಡ್ಮನ್ ಸ್ಯಾಚ್ಸ್ ತಜ್ಞರು ಮಾರ್ಚ್ ಕೊನೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಅದರಂತೆ ತೈಲ ಬೆಲೆಗಳು ಮೇ ವೇಳಗೆ ಭಾರಿ ಇಳಿಕೆ ಕಂಡಿವೆ.