

ನವದೆಹಲಿ: ಕೋವಿಡ್ 19 ಸಂಪೂರ್ಣ ನಿಯಂತ್ರಣಕ್ಕೆ ಬಂದು ಸ್ತಬ್ಧವಾಗಿರುವ ವಿಶ್ವ ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯನ್ನು (ಡಬ್ಲ್ಯೂಎಚ್ಒ) ಮರುರಚಿಸಬೇಕು ಎಂಬ ಭಾರತದ ಆಗ್ರಹಕ್ಕೆ ಆಸ್ಟ್ರೆಲಿಯಾ ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭಾರತದಲ್ಲಿನ ಆಸ್ಟ್ರೇಲಿಯಾದ ನಿಯೋಜಿತ ರಾಯಭಾರಿ ಬ್ಯಾರಿ ಓ ಫರೆಲ್, ಕೋವಿಡ್ ಆತಂಕ ದೂರಾದ ಬಳಿಕ ವಿಶ್ವವನ್ನು ಮರುರೂಪಿಸುವ ಬಗ್ಗೆ ನಿರಂತರವಾಗಿ ಚರ್ಚೆಗಳು ಸಾಗಿವೆ. ಉದಾಹರಣೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಡಬ್ಲ್ಯೂಎಚ್ಒ ಅನ್ನು ಮರುರಚಿಸಬೇಕು ಎಂದು ಜಿ20 ರಾಷ್ಟ್ರಗಳ ನಾಯಕರ ವರ್ಚುಯಲ್ ಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಆಸ್ಟ್ರೇಲಿಯಾ ಸರ್ಕಾರದ ಬೆಂಬಲ ಕೂಡ ಇದೆ ಎಂದು ಹೇಳಿದರು.
ಕೋವಿಡ್ ಪರಿಸ್ಥಿತಿಯನ್ನು ಡಬ್ಲ್ಯೂಎಚ್ಒ ನಿಭಾಯಿಸಿದ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂಬುದು ಆಸ್ಟ್ರೇಲಿಯಾ ಸರ್ಕಾರದ ಅಭಿಪ್ರಾಯವಾಗಿದೆ. ಆದರೆ, ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ಇದನ್ನು ಮಾಡಬಹುದು ಎಂದು ತಿಳಿಸಿದ್ದಾರೆ.
ಆಸೀಸ್ ಪ್ರಜೆಗಳು ಸ್ವದೇಶಕ್ಕೆ: ಕೋವಿಡ್ ಸಂಬಂಧಿತ ಲಾಕ್ಡೌನ್ಗಳು ಮತ್ತು ಸಂಚಾರ ನಿರ್ಬಂಧದಿಂದಾಗಿ ಆಸ್ಟ್ರೇಲಿಯಾದ ಪ್ರಜೆಗಳು ವಿವಿಧ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆದರೂ ಇದುವರೆಗೆ 2 ಸಾವಿರ ಜನರನ್ನು ಸ್ವದೇಶಕ್ಕೆ ರವಾನಿಸಲಾಗಿದೆ. ಮುಂದಿನ ವಾರ ಇನ್ನು ನಾಲ್ಕು ವಿಮಾನಗಳಲ್ಲಿ ಉಳಿದವರನ್ನು ಕೂಡ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಅದೇ ರೀತಿ ಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಸಿಲುಕಿಕೊಂಡಿರುವ ಜನರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ. (500 ಡಾಲರ್) ಧನಸಹಾಯ ನೀಡಲಾಗಿದೆ ಎಂದು ಹೇಳಿದ್ದಾರೆ.