

ಆಂಧ್ರಪ್ರದೇಶ: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಮುಂಬರುವ ಚಿತ್ರದಲ್ಲಿ ಸಾಹಸ ದೃಶ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬ ವದಂತಿಗಳು ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ತ್ರಿಶಾ ಕೃಷ್ಣನ್ ಪ್ರಸ್ತುತ ಲೋಕೇಶ್ ಕನಕರಾಜ್ ಅವರ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ನಟ ವಿಜಯ್ ಅವರೊಡನೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯ ಈ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ತ್ರಿಶಾ ತಮ್ಮ ಮೂರನೇ ಮಲಯಾಳಂ ಚಿತ್ರ 'ಐಡೆಂಟಿಟಿ'ಗೆ ಸಹಿ ಹಾಕಿದ್ದಾರೆ.
'ಐಡಿಂಟಿಟಿ' ಚಿತ್ರದಲ್ಲಿ ಟೊವಿನೋ ಥಾಮಸ್ ಅವರಿಗೆ ನಾಯಕಿಯಾಗಿ ವಿಶೇಷ ಪಾತ್ರದಲ್ಲಿ ತ್ರಿಶಾ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಅಖಿಲ್ ಪೌಲ್ ಮತ್ತು ಅನಸ್ ಖಾನ್ ನಿರ್ದೇಶಿಸಲಿದ್ದಾರೆ ಎಂದು ಸಿನಿ ವರದಿ ಹೇಳಿದೆ. ತ್ರಿಶಾ ಸೆಪ್ಟೆಂಬರ್ 2023 ರಲ್ಲಿ ಚಿತ್ರದ ಸೆಟ್ಗೆ ಆಗಮಿಸಲಿದ್ದು, ಚಿತ್ರೀಕರಣಕ್ಕೆ 45 ದಿನಗಳ ಡೇಟ್ಸ್ ಕೂಡ ನೀಡಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್ ಸೀಕ್ವೆನ್ಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,(ಏಜೆನ್ಸೀಸ್).