

ನವದೆಹಲಿ: ಈಗ ವಸ್ತುಗಳನ್ನು ಖರೀದಿಸಿ, ಮುಂದೆ ಎಂದಾದರೂ ಹಣ ಪಾವತಿಸಿ ಎಂಬ ಯೋಜನೆ ಅಮೆರಿಕದಲ್ಲಿ ಭಾರಿ ಜನಪ್ರಿಯಗೊಳ್ಳುತ್ತಿದೆ. ಕಡಿಮೆ ಬೆಲೆಯ ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿಸಿ, ಆಫ್ಟರ್ಪೇ ಎಂಬ ಸಂಸ್ಥೆಯ ಸಹಾಯದಿಂದ ಪಾವತಿಸುವ ಮೊತ್ತವನ್ನು ಸಮಾನ ಮಾಸಿಕ ಕಂತಾಗಿ (ಇಎಂಐ) ಪರಿವರ್ತಿಸಿಕೊಳ್ಳಬಹುದು. ಆದರೆ ಈ ಸೌಲಭ್ಯ ಸದ್ಯ ಭಾರತದಲ್ಲಿ ಲಭ್ಯವಿಲ್ಲ. ಬದಲಿಗೆ ಅಮೆರಿಕದಲ್ಲಿ ಲಭ್ಯವಿದೆ.
ಕರೊನಾ ಲಾಕ್ಡೌನ್ನಿಂದಾಗಿ ಬಹುತೇಕ ಎಲ್ಲ ಉದ್ಯಮಗಳು ವಹಿವಾಟು ಇಲ್ಲದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಅವುಗಳನ್ನು ಈ ಸಂಕಷ್ಟದಿಂದ ಪಾರು ಮಾಡಲು ಆಫ್ಟರ್ಪೇ ಸಂಸ್ಥೆ ಈಗ ಖರೀದಿಸಿ ಮುಂದೆ ಎಂದಾದರೂ ಹಣ ಪಾವತಿಸಿ ಯೋಜನೆಯನ್ನು ಜಾರಿಗೊಳಿಸಿದೆ.
ಈ ಸೌಲಭ್ಯವನ್ನು ಪಡೆದುಕೊಳ್ಳಲು ಮೊದಲು ಆಫ್ಟರ್ಪೇ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಬಳಿಕ ನಿಮ್ಮ ಇಷ್ಟದ ಸಣ್ಣ ಮೊತ್ತದ ವಸ್ತುಗಳನ್ನು ಉದಾಹರಣೆಗೆ 20 ಸಾವಿರ ರೂ. (260 ಡಾಲರ್) ಮೌಲ್ಯದ ವಸ್ತುವನ್ನು ಖರೀದಿಸಿದಾಗ ನಾಲ್ಕು ಬಡ್ಡಿರಹಿತ ಇಎಂಐಗಳನ್ನಾಗಿ ಅದನ್ನು ವಿಭಜಿಸಿ, ಹಣ ಪಾವತಿಸಲು ಸೂಚಿಸಲಾಗುತ್ತದೆ. ಇದನ್ನು ಮುಂದೆ ಎಂದಾದರೂ ಪಾವತಿಸಬಹುದು ಎನ್ನಲಾಗಿದೆ.
ಆನ್ಲೈನ್ ಶಾಪಿಂಗ್ ಮಾಡುವವರಿಗೆ ಹಾಗೂ ಕೋವಿಡ್-19 ಪಿಡುಗಿನಿಂದ ಭಾರಿ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಕಂಪನಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಲ್ಲವೇ? ಹೌದು. ಮೊದಲ ಬಾರಿಯ ಗ್ರಾಹಕರು ತಮ್ಮಿಷ್ಟದ ವಸ್ತುವನ್ನು ಕೊಂಡು, ಇಎಂಐ ಪಾವತಿಸದೆ ವಂಚಿಸಬಹುದು. ಇದರಿಂದ ಕಂಪನಿಯಲ್ಲಿ ಅನುತ್ಪಾದಕ ಆಸ್ತಿಯ (ಎನ್ಪಿಎ) ಪ್ರಮಾಣ ಹೆಚ್ಚಾಗುವ ಅಪಾಯುವೂ ಇದೆ.
ಸದ್ಯ ಆಫ್ಟರ್ಪೇ ಸಂಸ್ಥೆ ಮಾರಾಟಗಾರರಿಂದ ಶೇ.4-6ರವರೆಗೆ ಕಮಿಷನ್ ಪಡೆದುಕೊಳ್ಳುತ್ತದೆ. ಇದಿಷ್ಟೇ ಅದರ ಆದಾಯವಾಗಿರುತ್ತದೆ. ಗ್ರಾಹಕರು ಹಣ ಪಾವತಿಸಲು ಆರಂಭಿಸಿದ ಬಳಿಕ ಅದಕ್ಕೆ ಹೆಚ್ಚಿನ ಆದಾಯ ಬರುತ್ತದೆ.