ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್​ ಸಾವು: ಮಾಜಿ ಸಚಿವ ಸೇರಿ 6 ಜನರ ವಿರುದ್ಧ ಎಫ್​ಐಆರ್​

death
Published on

ಬೆಂಗಳೂರು: ತಲೆಗೆ ಗುಂಡುಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಭಾವಿ ರಾಜಕಾರಣಿ ಸೇರಿ 6 ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಸಾವಿಗೂ ಮುನ್ನ ಪ್ರದೀಪ್​ ಅವರು ಗೋಪಿ, ಸೋಮಯ್ಯ, ರಮೇಶ್​ ರೆಡ್ಡಿ, ಡಾ. ಜಯರಾಮ್​ ರೆಡ್ಡಿ, ರಾವ ಭಟ್​ ಎಂಬುವರ ಹೆಸರನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿ 2.2 ಕೋಟಿ ರೂ. ಮೋಸ ಮಾಡಿದ್ದಾಗಿ ಆರೋಪಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಸಚಿವರೊಬ್ಬರ ಹೆಸರನ್ನೂ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಪ್ರದೀಪ್​ ಪತ್ನಿ ನಮಿತಾ ದೂರಿನನ್ವಯ 6 ಜನರ ವಿರುದ್ಧ ಕೇಸ್​ ದಾಖಲಾಗಿದೆ. ಬೆಂಗಳೂರಿನ ಆರ್.ಆರ್.ನಗರದ ಆಸ್ಪತ್ರೆಯಲ್ಲಿ ಪ್ರದೀಪ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.

ದೂರಿನಲ್ಲಿ ಏನಿದೆ?: ನನ್ನ ಗಂಡನಾದ ಪ್ರದೀಪ್ ಅವರು ಈಗೆ 4-5 ವರ್ಷಗಳಿಂದ ಹಣಕಾಸಿನ ವಿಚಾರದಲ್ಲಿ, ಹೆಚ್ಚಿನ ಒತ್ತಡದಲ್ಲಿದ್ದರು. ಇವರು ಈ ಹಿಂದೆ ಹಲವಾರು ವ್ಯಾಪಾರಗಳಲ್ಲಿ ಹಣ ಹೂಡಿಕೆ ಮಾಡಿದ್ದು ಹಣಕಾಸಿನ ವ್ಯವಹಾರದಲ್ಲಿ, ಆರ್ಥಿಕ ನಷ್ಟ ಉಂಟಾಗಿರುತ್ತೆ. ಇವರಿಗೆ ಹಲವಾರು ವ್ಯಾಪಾರ ಉದ್ಯಮಗಳ ಮೂಲಗಳಿಂದ ಹಣಕಾಸು ಬರಬೇಕಾಗಿತ್ತು. ಆದರೆ ದುರಾದೃಷ್ಟದಿಂದ ಹೂಡಿಕೆ ಮಾಡಲಾಗಿದ್ದ ಹಣವನ್ನು ಗೋಪಿ, ಸೋಮಯ್ಯ ಮತ್ತು ಇತರರಿಂದ ಮತ್ತೆ ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ನಾನು ಕೂಡ ನನ್ನ ಗಂಡ ಪ್ರದೀಪನ ಸಹಾಯಕ್ಕಾಗಿ ಬ್ಯಾಂಕಿನಿಂದ ಲೋನ್ ಪಡೆದು ಆರ್ಥಿಕ ಒತ್ತಡದಲ್ಲಿದ್ದೇನೆ. ನನ್ನ ಗಂಡನಿಗೆ ಇತರೆ ಮೂಲಗಳಿಂದ ಬರಬೇಕಾಗಿರುವ ಹಣವನ್ನು ಡೆತ್ ನೋಟ್ ಪ್ರಕಾರವಾಗಿ ಕೊಡಿಸಿ. ಮತ್ತು ನಮಗೆ ನ್ಯಾಯ ಕೊಡಿಸಿಕೊಡಬೇಕೆಂದು ಹಾಗೂ ತನ್ನ ಗಂಡನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು... ಎಂದು ಪ್ರದೀಪ್ ಪತ್ನಿ ನಮಿತಾ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ ಬಳಿಯ ಅಮಲೀಪುರದ ನಿವಾಸಿ ಎಸ್​. ಪ್ರದಿಪ್​ (47) ನಿನ್ನೆ(ಭಾನುವಾರ) ಸಂಜೆ ಕನಕಪುರ ರಸ್ತೆ ನೆಟ್ಟಗೆರೆ ಬಳಿಯ ರೆಸಾರ್ಟ್​ ಸಮೀಪದಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ವರ್ಷಾಚರಣೆ ಸಲುವಾಗಿ ಕುಟುಂಬ ಸಮೇತ ಕನಕಪುರ ರಸ್ತೆ ಕಗ್ಗಲಿಪುರ ಸಮೀಪವಿರುವ ನೆಟ್ಟಗೆರೆ ಬಳಿಯ ರೆಸಾರ್ಟ್​ಗೆ ಕುಟುಂಬ ಸಮೇತ ಬಂದ ಪ್ರದಿಪ್​, ರಾತ್ರಿ ಪಾರ್ಟಿ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಶಿರಾಗೆ ಹೋಗಬೇಕು ಎಂದು ಹೇಳಿ ಕುಟುಂಬ ಸದಸ್ಯರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಒಬ್ಬರೇ ಎಚ್​ಎಸ್​ಆರ್​ ಲೇಔಟ್​ ಮನೆಗೆ ಬಂದಿದ್ದರು.

ಮನೆಯಲ್ಲಿ ಡೆತ್​ನೋಟ್​ ಬರೆದು ಪತ್ನಿ ಮತ್ತು ಕೆಲ ಸ್ನೇಹಿತರ ಮೊಬೈಲ್​ಗೆ ವಾಟ್ಸ್​ಆ್ಯಪ್​ ಮೂಲಕ ಪ್ರದೀಶ್​ ಕಳುಹಿಸಿದ್ದಾರೆ. ಗಾಬರಿಗೊಂಡ ಕುಟುಂಬ ಸದಸ್ಯರು ಸಂಜೆ ರೆಸಾರ್ಟ್​ನಿಂದ ಹೊರಟ್ಟಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಕಾರಿನಲ್ಲಿ ಬಂದ ಪ್ರದಿಪ್​, ಕುಟುಂಬ ಸದಸ್ಯರ ಕಾರನ್ನು ಓವರ್​ ಟೇಕ್​ ಮಾಡಿ ನಿಲ್ಲಿಸಿದ್ದಾರೆ. ಕುಟುಂಬ ಸದಸ್ಯರು ಏನಾಯಿತು ಇಲ್ಲೇ ಇದ್ದಾರೆ ಎಂದು ಪ್ರದಿಪ್​ ಕಾರಿನ ಬಳಿಗೆ ಹೋಗುವಷ್ಟರಲ್ಲಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಏನಾಯಿತು ಎನ್ನುವಷ್ಟದಲ್ಲಿ ಪ್ರದಿಪ್​, ಸ್ಥಳದಲ್ಲಿಯೇ ಅಸುನೀಗಿದ್ದರು. ವಿಷಯ ತಿಳಿದ ರಾಮನಗರ ಜಿಲ್ಲಾ ಎಸ್​ಪಿ ಸಂತೋಷ್​ ಬಾಬು ಮತ್ತು ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಡೆತ್​ನೋಟ್​ನಲ್ಲಿ ಏನಿದೆ?: 'ಎಚ್​ಎಸ್​ಆರ್​ ಲೇಔಟ್​ ಸಮೀಪದ ಹರಳೂರಿನಲ್ಲಿ ಕ್ಲಬ್​ ತೆರೆಯುವ ಉದ್ದೇಶಕ್ಕೆ ಕೆ.ಗೋಪಿ ಮತ್ತು ಸೋಮಯ್ಯ ಬಳಿ 2018ರಲ್ಲಿ ಚರ್ಚೆ ನಡೆಸಿದೆ. ಅದಕ್ಕೆ ಇಬ್ಬರೂ ಒಪ್ಪಿಕೊಂಡು ಪ್ರತಿ ತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದರೆ 1.5 ಲಕ್ಷ ರೂ. ವೇತನ ಕೊಡುವುದಾಗಿ ಹೇಳಿದರು. ಅದಕ್ಕೆ ಒಪ್ಪಿಕೊಂಡು 2018ರ ಮೇ ತಿಂಗಳಿನಿಂದ ಡಿಸೆಂಬರ್​ ವರೆಗೆ 1.1 ಕೋಟಿ ರೂ. ಬ್ಯಾಂಕ್​ಗೆ ಜಮೆ ಮಾಡಿದ್ದೇನೆ. ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರೂ. ನಗದು ರೂಪದಲ್ಲಿ ಈ ಇಬ್ಬರಿಗೂ ನೀಡಿದ್ದೆ. ಆದರೆ, ಇಲ್ಲಿಯವರೆಗೂ ಯಾವುದೇ ಲಾಭಾಂಶ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಪ್ರಭಾವಿ ರಾಜಕಾರಣಿ ಬಳಿಗೆ ಹೋದಾಗ ರಾಜೀ ಸಂಧಾನ ಮಾಡಿಸಿ 90 ಲಕ್ಷ ರೂ. ವಾಪಸ್​ ಕೊಡಿಸಿದ್ದರು. ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ರಮೇಶ್​ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೇನೆ. ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ರಾಘವ ಭಟ್​ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್​ ಕೊಡದೆ ಮೋಸ ಮಾಡಿದ್ದಾರೆ' ಎಂದು ಪ್ರದೀಪ್​ ಆರೋಪಿಸಿದ್ದಾರೆ.

2.2 ಕೋಟಿ ರೂ. ಬಾಕಿ?: ರಾಜೀ ಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷ ರೂ. ಮೌಲ್ಯದ 9 ಚೆಕ್​ ಕೊಡಿಸಿದ್ದರು. ಪ್ರತಿ ತಿಂಗಳು ಜಮೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಪ್ರದೀಪ್​ ಡೆತ್​ನೋಟ್​ ಪ್ರಕಾರ 2.2 ಕೋಟಿ ರೂ. ಕೊಡಬೇಕೆಂದು ಹೇಳಿಕೊಂಡಿದ್ದಾರೆ. ಕ್ಲಬ್​ ತೆರೆಯಲು ಮಾಡಿಕೊಂಡಿದ್ದ ಸಾಲ ಅದಕ್ಕೆ ಬಡ್ಡಿ ಪಾವತಿಗೆ ಪತ್ನಿ ಕೂಡ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಸಬೇಕು ಎಂದು ಪ್ರದೀಪ್​ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net