ಉದ್ಯಮಿ ಮನೆ ಕಳ್ಳತನ ಪ್ರಕರಣ: ಇಬ್ಬರ ಸೆರೆ

Arrest Kaidhi
Published on

ಬೆಂಗಳೂರು: ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು
ಬಂಧಿಸಿರುವ ವಿವಿಪುರ ಠಾಣೆ ಪೊಲೀಸರು ಆರೋಪಿಗಳಿಂದ ೧.೨೨ ಕೋಟಿ ರೂ. ಮೌಲ್ಯದ ೧.೫ ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಕೇಶವ ಪಾಟೀಲ್ ಮತ್ತು ನಿತಿನ್ ಕಾಳೆ ಬಂಧಿತರು.
ಆರೋಪಿಗಳು ಸೆ.೮ ರಂದು ವಿವಿಪುರ ಠಾಣಾ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಕೆ.ಜಿ.ಗಟ್ಟಲೆ ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಸಂಬಂಧ ಉದ್ಯಮಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಕೇಶವ ಉದ್ಯಮಿಯ ಕಾರು ಚಾಲಕನಾಗಿದ್ದ. ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ, ಮಾಲೀಕರಾಗಿದ್ದ ಉದ್ಯಮಿ ಮನೆಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ಇರುವುದನ್ನು ಗಮನಿಸಿದ್ದ. ಈ ಬಗ್ಗೆ ಸ್ನೇಹಿತ ನಿತಿನ್ ಕಾಳೆ ಜತೆಗೆ ಚರ್ಚೆ ಮಾಡಿ ಕಳ್ಳತನದ ಪ್ಲಾನ್ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿ ನಿತಿನ್ ಕದ್ದ ಚಿನ್ನಾಭರಣವನ್ನು ತನ್ನ ಬಾವ ಮನೆಯಲ್ಲಿ ಇರಿಸಿದ್ದ ಸುಮಾರು ೫೫ ಲಕ್ಷ ಮೌಲ್ಯದ ೬೫೨ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಕೇಶವ ಪಾಟೀಲ್ ತನ್ನ ಅಕ್ಕ ಹಾಗೂ ಸ್ನೇಹಿತನ ಮನೆಯಲ್ಲಿ ಇರಿಸಿದ್ದ ೩೯ ಲಕ್ಷ ರೂ. ಮೌಲ್ಯದ ೫೬೪ ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net