

ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯ ಮಾಧವ ನಗರದಲ್ಲಿನ ರಿನೈಸಾನ್ಸ್ ಹೋಟೆಲ್‌ನಲ್ಲಿ ತಂಗಿದ್ದ ಉದ್ಯಮಿಯೊಬ್ಬ ಸೋಮವಾರ ಮಧ್ಯಾಹ್ನ ೧೯ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳುನಾಡು ಮೂಲದ ಶರಣ್ ಆತ್ಮಹತ್ಯೆ ಮಾಡಿಕೊಂಡವರು. ಶರಣ್ ಅವರು ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ರಿನೈಸಾನ್ಸ್ ಹೋಟೆಲ್‌ನಲ್ಲೇ ತಂಗುತ್ತಿದ್ದರು. ಶನಿವಾರ (ಏ.೬) ನಗರಕ್ಕೆ ಬಂದಿದ್ದ ಶರಣ್, ರಿನೈಸ್ಸಾನ್ಸ್ ಹೋಟೆಲ್‌ನ ೧೯ನೇ ಮಹಡಿಯಲ್ಲಿನ ಕೊಠಡಿಯಲ್ಲಿ ತಂಗಿದ್ದರು. ಭಾನುವಾರ ಕೊಠಡಿ ಖಾಲಿ ಮಾಡಬೇಕಿದ್ದ ಅವರು ಅದೇ ಕೊಠಡಿಯಲ್ಲಿ ಮತ್ತೆ ಎರಡು ದಿನ ಉಳಿಯುವುದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ್ದರು. ಶರಣ್, ತಾವು ತಂಗಿದ್ದ ಕೊಠಡಿಯ ಬಾಲ್ಕನಿಯಿಂದ ಏಕಾಏಕಿ ಕೆಳಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೊಠಡಿಯಲ್ಲಿ ಯಾವುದೇ ಪತ್ರ ಬರೆದಿಟ್ಟಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ. ಹಣಕಾಸಿನ ವಿಚಾರಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಕುಟುಂಬ ಸದಸ್ಯರಿಗೆ ವಿಷಯ ತಿಳಿಸಲಾಗಿದ್ದು, ಅವರ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣ್, ಕೊನೆಯ ಬಾರಿಗೆ ಮಾರ್ಚ್‌ನಲ್ಲಿ ಈ ಹೋಟೆಲ್‌ಗೆ ಬಂದು ವಾಸ್ತವ್ಯ ಹೂಡಿದ್ದರು. ಕೊಠಡಿಯಲ್ಲಿ ಶರಣ್‌ರ ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಅವರ ಮೊಬೈಲ್‌ಗೆ ಬಂದಿರುವ ಕರೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯಮಿ ಮಹಡಿಯಿಂದ ಜಿಗಿಯುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.