

ಬೆಂಗಳೂರು: ರಾಜ್ಯ ಸರ್ಕಾರ ಉದ್ಯಮಸ್ನೇಹಿ ಉಪಕ್ರಮಕ್ಕಾಗಿ ಜನವರಿಯ ವೇಳೆಗೆ ಏಕಗವಾಕ್ಷಿ ಮಂಜೂರಾತಿ ವ್ಯವಸ್ಥೆಗೆ ಅಗತ್ಯವಿರುವ ತಂತ್ರಾಂಶ ಸಿದ್ಧಪಡಿಸಲಿದೆ(Business friendly initiative; Single window system ready for January) ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ(M B Patil) ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಇ-ಆಡಳಿತ ಇಲಾಖೆಯ ಮುಖ್ಯಸ್ಥ ಉಜ್ವಲ್ ಘೋಷ್ , ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ತಂತ್ರಾಂಶ ರೂಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳಿಗೆಲ್ಲ ಡಿಸೆಂಬರ್ ಗಡುವು ಕೊಡಲಾಗಿದೆ ಎಂದರು.
ಹೂಡಿಕೆ ಯೋಜನೆಗಳಿಗೆ ಮಂಜೂರಾತಿ, ಕೈಗಾರಿಕಾ ನಿವೇಶನ, ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನ ಇತ್ಯಾದಿಗಳ ಹಂಚಿಕೆ ಈಗಿರುವ ಸಂಕೀರ್ಣ ಮತ್ತು ಬಹುಹಂತಗಳ ಅನುಮತಿ ವಿಧಾನದಿಂದ ವಿಳಂಬವಾಗುತ್ತಿದೆ. ಇದಕ್ಕೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಇತಿಶ್ರೀ ಹಾಡಲಾಗುವುದು. ಇದಕ್ಕಾಗಿ ಮೈಕ್ರೋಸ್‌ಟಾ ಕಂಪನಿಯು ಸಾಫ್ಟ್‌ವೇರ್ ಸಿದ್ಧಪಡಿಸಿದೆ. ಇದರೊಂದಿಗೆ ಎಲ್ಲ ಇಲಾಖೆಗಳ ಜೋಡಣೆ ಬಾಕಿದ್ದು, ಅದನ್ನು ತ್ವರಿತವಾಗಿ ಮಾಡಬೇಕು. ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನದ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ಇನ್ನೊಂದು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕೈಗಾರಿಕಾ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆಯನ್ನು ತರಲಾಗುವುದು ಎಂದು ನಾವು ಮಾತು ಕೊಟ್ಟಿದ್ದೆವು. ಹೊಸ ತಂತ್ರಾಂಶವನ್ನು ಬಳಸುವುದು ಹೇಗೆಂಬ ಬಗ್ಗೆ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗೆ ಸಮರ್ಪಕ ತರಬೇತಿ ಕೊಡಲಾಗುವುದು. ಉದ್ಯಮಿಗಳು ಇನ್ನು ಮುಂದೆ ಹತ್ತಾರು ಇಲಾಖೆಗಳಿಗೆ ಎಡತಾಕುವ ಪ್ರಮೇಯವೇ ಇರುವುದಿಲ್ಲ ಎಂದರು.
ನೂತನ ಏಕಗವಾಕ್ಷಿ ವ್ಯವಸ್ಥೆ ಸಂಪೂರ್ಣ ಆನ್‌ಲೈನ್ ಆಗಿರಲಿದೆ. ಉದ್ಯಮಿಗಳು ತಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿದರೆ ಮಿಕ್ಕೆಲ್ಲ ವಿವರಗಳು ತಾವಾಗಿಯೇ ದೊರೆಯುತ್ತವೆ. ಇದು ಸುಲಲಿತ ಕೈಗಾರಿಕಾ ಸಂಸ್ಕೃತಿಯ ಭಾಗವಾಗಿದೆ. ಜನವರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಹೂಡುತ್ತಿದ್ದಾರೆ. ನಾವು ಅವರಿಗೆ ಏಕಗವಾಕ್ಷಿ ಅನುಮತಿಯಂತಹ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ರಾಜ್ಯವು ಮತ್ತಷ್ಟು ಉದ್ಯಮಸ್ನೇಹಿ ಮತ್ತು ತಂತ್ರಜ್ಞಾನದ ಸಮರ್ಥ ಬಳಕೆಯ ತಾಣವಾಗಲಿದೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.