

ಸುಂಟಿಕೊಪ್ಪ : ಸುಂಟಿಕೊಪ್ಪ ಭಾಗದಲ್ಲಿ ಬಸ್ ಅವ್ಯವಸ್ಥೆ ವಿರುದ್ಧ ಸುಂಟಿಕೊಪ್ಪದಲ್ಲಿ ಸಾರ್ವಜನಿಕರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರಿಂದ ಅಸಮಾಧಾನ ಕೇಳಿಬಂದ ಹಿನ್ನೆಲೆಯಲ್ಲಿ ಕುಶಾಲನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಸುಂಟಿಕೊಪ್ಪ ಬಸ್ ನಿಲ್ದಾಣಕ್ಕೆ ಆಗಮಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುವ ವೇಳೆ ಸಾರ್ವಜನಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕುಶಾಲನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಬೆಳಗ್ಗೆ 7 ಗಂಟೆಯಿಂದ 10.30 ಗಂಟೆವರೆಗೆ ಸುಂಟಿಕೊಪ್ಪ ಮಾರ್ಗವಾಗಿ ಸಂಚರಿಸಿದ ಒಟ್ಟು 30 ಬಸ್‌ಗಳಲ್ಲಿ ಕಂಡುಬಂದ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಪ್ರತಿ ಬಸ್‌ನಲ್ಲಿ ಕಿಕ್ಕಿರಿದು ತುಂಬಿದ ಜನ ಪ್ರಯಾಣ ಮಾಡಿದ್ದು, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದನ್ನು ಅಧಿಕಾರಿ ಕಣ್ಣಾರೆ ಕಂಡರು. ಈ ಚಿತ್ರಗಳನ್ನು ಸೆರೆ ಹಿಡಿದು ಮೇಲಧಿಕಾರಿಗೆ ವರದಿ ನೀಡುವ ವೇಳೆ ಅಲ್ಲಿಯೇ ಇದ್ದ ಸಾರ್ವಜನಿಕರು ಅಧಿಕಾರಿ ಬಳಿ ಆಗಮಿಸಿ ತರಾಟೆಗೆ ತೆಗೆದುಕೊಂಡರು. ನ.6 ರಂದು ಇದೇ ರೀತಿ ಪರಿಶೀಲನೆ ನಡೆಸಿದ್ದು, ಇದೂವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಈ ವೇಳೆ ಪ್ರತಿಕ್ರಿಯಿಸಿದ ಅಶೋಕ್ ಸದ್ಯ ಬಸ್ ನಿಲ್ದಾಣದಲ್ಲಿ ತಮ್ಮ ಗಮನಕ್ಕೆ ಬಂದಿರುವ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಿಂದ ಬರುವ ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಸಂಜೆ ವನ್ಯಪ್ರಾಣಿಗಳ ಕಾಟದ ನಡುವೆ ಜೀವ ಭಯದಿಂದ ಮನೆಗಳನ್ನು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಎದುರುಗೊಳ್ಳುತ್ತಿದೆ. ಮೂರು ಬಸ್‌ಗಳಲ್ಲಿ ಸಂಚರಿಸುವ ಜನ ಒಂದೇ ಬಸ್‌ನಲ್ಲಿ ಒಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರಾದ ಸುರೇಶ್, ಗೋಪಿ, ಎಸ್‌ಡಿಟಿಯು ಜಿಲ್ಲಾಧ್ಯಕ್ಷ ಶರೀಫ್, ಕೆ.ಎ.ಲತೀಫ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.