

ಗುಜರಾತ್: ರಸ್ತೆಯ ಇಳಿಜಾರಿನಲ್ಲಿ ಚಲಿಸುತ್ತಿದ್ದ ವೇಳೆ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 46 ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಗುಜರಾತಿನ ಬನಸ್ಕಾಂತ ಜಿಲ್ಲೆಯ ಅಂಬಾಜಿಯಲ್ಲಿ ವರದಿಯಾಗಿದೆ.
ಅಪಘಾತಕ್ಕೆ ಸಿಲುಕಿದ ಹದಿನೆಂಟು ಪ್ರಯಾಣಿಕರನ್ನು ಜಿಲ್ಲಾ ಕೇಂದ್ರ ಪಾಲನ್‌ಪುರದ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಉಳಿದವರಿಗೆ ಅಂಬಾಜಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಧವಲ್ ಪಟೇಲ್ ತಿಳಿಸಿದ್ದಾರೆ.
ಘಟನೆಯ ವಿವರ: ಅಪಘಾತದಲ್ಲಿ ಗಾಯಗೊಂಡ ಯಾತ್ರಾರ್ಥಿಗಳು ಅರಸೂರು ಬೆಟ್ಟದಲ್ಲಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಸ್‌ನಲ್ಲಿ ಹಿಂತಿರುಗುತ್ತಿದ್ದರು. ಖೇಡಾ ಜಿಲ್ಲೆಯ ಕಂಜರಿ ಗ್ರಾಮದಿಂದ 46 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಗುಡ್ಡಗಾಡು ಇಳಿಜಾರಿನಲ್ಲಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಬಸ್ ರಸ್ತೆಯ ಪಕ್ಕದಲ್ಲಿದ್ದ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಮೇಲ್ಛಾವಣಿ ಕಿತ್ತು ಬಂದಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).