ರಾಜ್ಯದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

madu
Published on


ಮಂಗಳೂರು: ರಾಜ್ಯದಲ್ಲಿ ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 2 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


ಪ್ರಸ್ತುತ ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿದ್ದು, ಅವುಗಳನ್ನು 2 ಸಾವಿರಕ್ಕೆ ಏರಿಸಲಾಗುವುದು. ಪ್ರತಿ 2-3 ಗ್ರಾಪಂಗಳಿಗೆ ಒಂದು ಶಾಲೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ರಿಂದ 3ರಷ್ಟು ಶಾಲೆಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಈ ವರ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮೂರು ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಕಟ್ಟಿ, ಪಾಸಾಗಿ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗಿದೆ. ಈ ವರ್ಷದಿಂದ ಸಪ್ಲಿಮೆಂಟರಿ ಪರೀಕ್ಷೆ ಎನ್ನುವುದು ಇರುವುದಿಲ್ಲ. ಮೂರೂ ಪರೀಕ್ಷೆಗಳನ್ನು ಬೋರ್ಡ್ ಪರೀಕ್ಷೆಗಳೆಂದೇ ಪರಿಗಣಿಸಲಾಗುವುದು. ಇದನ್ನು 10ನೇ ತರಗತಿಗೂ ವಿಸ್ತರಿಸಲಾಗುತ್ತದೆ. ಈ ವರ್ಷ ಬೋರ್ಡ್ ಪರೀಕ್ಷೆ ಬರೆದ 1.30 ಲಕ್ಷ ವಿದ್ಯಾರ್ಥಿಗಳ ಪೈಕಿ 42 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಕಾಲೇಜಿಗೆ ದಾಖಲಾಗಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.


ಬ್ರಿಡ್ಜ್ ಕೋರ್ಸ್:
ಸಪ್ಲಿಮೆಂಟರಿ (ಬೋರ್ಡ್) ಪರೀಕ್ಷೆ ಬರೆದು ಪಾಸಾಗಿ ಕಾಲೇಜು ಸೇರುವವರಿಗೆ ಬ್ರಿಡ್ಜ್ ಕೋರ್ಸ್ ಕೊಡಿ ಅಂತ ಉನ್ನತ ಶಿಕ್ಷಣ ಸಚಿವರಲ್ಲಿ ಹೇಳಿದ್ದೇನೆ. ಕಾಲೇಜು ಸೇರುವಾಗ ವಿಳಂಬವಾದರೆ ವಿದ್ಯಾರ್ಥಿಗಳಿಗೆ ಇದು ಸಹಾಯವಾಗಲಿದೆ ಎಂದರು.


ಬ್ಯಾಗ್ ಹೊರೆ ಇಳಿಕೆ:
ರಾಜ್ಯದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ, ಆ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲಾಗುವುದು. ಇದಲ್ಲದೆ, ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳ ಹೊರೆ ಕಡಿಮೆ ಮಾಡಬೇಕಾಗಿದೆ. ಬ್ಯಾಗ್ ತೂಕವನ್ನು ಈಗಿನ ಭಾರಕ್ಕಿಂದ ಮೂರನೇ ಒಂದರಷ್ಟು ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.


ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅಭ್ಯಾಸವನ್ನು ಪ್ರಾರಂಭಿಸಲಾಗಿದೆ. ವಾರಕ್ಕೆರಡು ಬಾರಿ ಚಿಕ್ಕಿ ಅಥವಾ ಮೊಟ್ಟೆಯನ್ನು 10ನೇ ತರಗತಿವರೆಗೂ ವಿಸ್ತರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಎರಡು ವರ್ಷದಿಂದ ಜಾರಿಯಾಗಿದ್ದು, ಅದರ ಬದಲು ಸ್ಟೇಟ್ ಎಜ್ಯುಕೇಶನ್ ಪಾಲಿಸಿ ತರುತ್ತಿದ್ದೇವೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸ್ಟೇಟ್ ಎಜ್ಯುಕೇಶನ್ ಪಾಲಿಸಿ ಜಾರಿಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಕೃಪಾ ಆಳ್ವ, ಶುಭೋದಯ ಆಳ್ವ, ಬಿ. ಇಬ್ರಾಹಿಂ, ಸಲೀಂ, ಅಶ್ವನ್ ರೈ, ಪದ್ಮರಾಜ್ ಆರ್. ಇದ್ದರು.

ದ.ಕ.ದಲ್ಲಿ ಕಾಂಗ್ರೆಸ್‌ಗೆ ಮತ್ತೆ ಗೆಲುವು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ.ದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಸವಾಲು ಸ್ವೀಕರಿಸಿದ್ದೇವೆ. ಇಲ್ಲಿ ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಗೆಲ್ಲುತ್ತಿದ್ದಾರೆ. ಅದರಿಂದಲೇ ಸೋಲಲಿದ್ದಾರೆ. ಜನಾರ್ದನ ಪೂಜಾರಿಯಂಥವರು ಗೆದ್ದ ಕ್ಷೇತ್ರ ಇದು. 2004ರ ಹಿಂದಿನ ಸ್ಥಿತಿ ಮತ್ತೆ ಮರುಕಳಿಸಲಿದೆ. ಆಯಾ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿ ಮುಂಬರುವ ಲೋಕಸಭಾ ಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳ ವರದಿ ನೀಡಲು ವೀಕ್ಷಕರಿಗೆ 15 ದಿನ ಸಮಯಾವಕಾಶ ನೀಡಲಾಗಿದೆ ಎಂದು ಲೋಕಸಭಾ ಚುನಾವಣೆಯ ದ.ಕ. ಜಿಲ್ಲಾ ವೀಕ್ಷಕರೂ ಆಗಿರುವ ಮಧು ಬಂಗಾರಪ್ಪ ತಿಳಿಸಿದರು.

ಜೆಡಿಎಸ್‌ನವರು ಸಂಪರ್ಕದಲ್ಲಿದ್ದಾರೆ
ಜೆಡಿಎಸ್‌ನವರು ಬಿಜೆಪಿ ಜತೆ ಮೈತ್ರಿಗೆ ಮೊದಲು ಕಾಂಗ್ರೆಸ್ ಕಮ್ಯೂನಲ್ ಪಕ್ಷ ಅಂತ ಆರೋಪ ಮಾಡುತ್ತಿದ್ದರು. ಈಗ ಇವರ ಕತೆ ಏನಾಯ್ತು? ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ತತ್ವ ಸಿದ್ಧಾಂತ ಬದಲಾದ ಬಳಿಕ ಜೆಡಿಎಸ್‌ನ ಅನೇಕ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ದ.ಕ. ಜಿಲ್ಲೆಯಲ್ಲೂ ಅನೇಕರು ಸಂಪರ್ಕದಲ್ಲಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಐ ಹೇಟ್ ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ ನಮ್ಮ ಈಡಿಗ ಸಮುದಾಯದ ನಾಯಕ ಅಲ್ಲ. ಅವರದ್ದು ಹಿನ್ನೆಲೆಯನ್ನು ಕೆದಕಿ ನೋಡಿ. ಸುಮ್ಮನೆ ಬುರುಡೆ ಬಿಟ್ಟುಕೊಂಡು ತಿರುಗಿದರೆ ನಾಯಕ ಆಗುವುದಿಲ್ಲ. ಸಮಾಜವನ್ನು ದಾರಿ ತಪ್ಪಿಸಿ ಪ್ರಚಾರ ಪಡೆಯುವುದೇ ಆ ವ್ಯಕ್ತಿಯ ಕಾಯಕ. ಅವರನ್ನು ನಾನು ಹೇಟ್ ಮಾಡುತ್ತೇನೆ. ನಾನು ಅವರನ್ನು ಲೆಕ್ಕಕ್ಕೇ ತಕೊಂಡಿಲ್ಲ. ಸ್ವಾಮೀಜಿಯನ್ನು ಇಟ್ಕೊಂಡು ನಾನು ಮತ ಕೇಳಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net