ಕಮರಿಗೆ ಉರುಳಿಬಿದ್ದ ಬಸ್; ನಾಲ್ವರು ಸಾವು, 18 ಜನರಿಗೆ ಗಂಭೀರ ಗಾಯ!

Untitled design - 2023-10-09T132641.274
Published on

ಉತ್ತರಾಖಂಡ: ಭಾನುವಾರ (ಅ.08) 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಕಮರಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರಾಖಂಡದ ನೈನಿತಾಲ್‌ನಲ್ಲಿ ವರದಿಯಾಗಿದೆ.

ರಾಜ್ಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಕೂಡಲೇ ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಬಸ್ ನೈನಿತಾಲ್‌ನ ಕಲಾಧುಂಗಿ ರಸ್ತೆಯಲ್ಲಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ಬೆನ್ನಲ್ಲೇ ನಿತಾಲ್‌ನಲ್ಲಿರುವ ವಿಪತ್ತು ನಿಯಂತ್ರಣ ಕೊಠಡಿಯು ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ (SDRF) ಎಚ್ಚರಿಕೆ ನೀಡಿತು. ತಕ್ಷಣವೇ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿ, ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಿದೆ.

"ಹರಿಯಾಣದ ಹಿಸಾರ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿ 30-32 ಪ್ರಯಾಣಿಕರಿದ್ದರು. ನಾವು ಇದುವರೆಗೆ 25 ಜನರನ್ನು ರಕ್ಷಿಸಿದ್ದೇವೆ" ಎಂದು ನೈನಿತಾಲ್ ಎಸ್‌ಎಸ್‌ಪಿ ಪ್ರಹ್ಲಾದ್ ನಾರಾಯಣ್ ಮೀನಾ ಸ್ಥಳೀಯ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net