

ಬೆಂಗಳೂರು: ಜೂನ್ ವೇತನ ಸಿಗದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳ ನೌಕರರು ಮತ್ತು ಕುಟುಂಬದವರು ಬೀದಿಗಳಲ್ಲಿ ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಲು ಮುಂದಾಗಿದ್ದಾರೆ. ಲಾಕ್ಡೌನ್ ಮತ್ತು ಕರೊನಾ ಭೀತಿಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕರೊನಾ ಭೀತಿ ನಡುವೆಯೂ ಕೆಲಸ ಮಾಡುತ್ತಿರುವ ಸಾರಿಗೆ ನೌಕರರಿಗೆ ಮೂರು ತಿಂಗಳಿನಿಂದ ನಿಗದಿತ ದಿನದಂದು ವೇತನ ಸಿಗುತ್ತಿಲ್ಲ.
ಏಪ್ರಿಲ್ ಮತ್ತು ಮೇ ವೇತನ ಪಾವತಿಗೆ ರಾಜ್ಯ ಸರ್ಕಾರ ನಿಗಮಗಳಿಗೆ ಸಹಾಯಧನ ನೀಡಿತ್ತು. ಆದರೆ, ಜೂನ್ ವೇತನ ಪಾವತಿಗೆ ನಿಗಮಗಳಲ್ಲಿ ಹಣವಿಲ್ಲದ ಕಾರಣ ಜು. 19 ಕಳೆದರೂ ನೌಕರರಿಗೆ ವೇತನ ಪಾವತಿಯಾಗಿಲ್ಲ. ಅದರಿಂದ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನೌಕರರು ಜೀವನ ಸಾಗಿಸಲು ಅನಿವಾರ್ಯವಾಗಿ ಬೀದಿ ಬೀದಿಗಳಲ್ಲಿ ತಿರುಗಾಡಿ ತರಕಾರಿ, ಸೊಪ್ಪು, ಮೀನು, ಈರುಳ್ಳಿ ಮಾರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ
ಹೊಟ್ಟೆ ಪಾಡಿಗೆ ಹಲವು ಮಾರ್ಗ: ಕರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಸಮರ್ಪಕ ವೇತನ ಸಿಗುತ್ತಿಲ್ಲ. ಈ ಹಿಂದೆ ನೀಡುತ್ತಿದ್ದ ಭತ್ಯೆಗಳನ್ನು ಕಡಿತ ಮಾಡಲಾಗಿದೆ. ಜೂನ್ ವೇತನ ಇನ್ನೂ ಪಾವತಿಯಾಗಿಲ್ಲ. ಹೀಗಿರುವಾಗ ಮನೆ ಬಾಡಿಗೆ ಹಣ ನೀಡುವುದು, ಕುಟುಂಬ ನಿರ್ವಹಣೆಗೆ ಬೇಕಾಗುವ ಹಣಕ್ಕಾಗಿ ಬೇರೆ ದಾರಿ ನೋಡಿಕೊಳ್ಳಬೇಕಿದೆ. ಹೀಗಾಗಿ ತಳ್ಳುಗಾಡಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಈರುಳ್ಳಿ ಮಾರಾಟ ಮಾಡುತ್ತ 300ರಿಂದ 400 ರೂ. ಸಂಪಾದಿಸುತ್ತಿದ್ದೇನೆ. ಕೆಲ ಸಹೋದ್ಯೋಗಿಗಳೂ ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ವಿಜಯವಾಣಿಯೊಂದಿಗೆ ಹೇಳಿಕೊಂಡಿದ್ದಾರೆ.
ಸ್ನೇಹಿತರೊಬ್ಬರು ಕನಕಪುರದಿಂದ ಮೀನು ತಂದುಕೊಡುತ್ತಾರೆ. ಅದನ್ನು ನಗರದ ಮೀನು ಮಾರಾಟ ಅಂಗಡಿಗಳಿಗೆ ಸರಬರಾಜು ಮಾಡುತ್ತೇನೆ. ಇದರಿಂದ 250ರಿಂದ 300 ರೂ.ವರೆಗೆ ಸಿಗುತ್ತದೆ. ಹೇಗೋ ಜೀವನ ನಡೆಯುತ್ತಿದೆ ಎಂದು ಬಿಎಂಟಿಸಿಯ ಮತ್ತೊಬ್ಬ ನೌಕರ ತಿಳಿಸಿದರು.