

ಬೆಂಗಳೂರು: ಬಸ್ ಮತ್ತು ಕಾರ್ ಆಪರೇಟರ್ಸ್ ಆ್ ಇಂಡಿಯಾ ಸಂಸ್ಥೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ, ಆಗಸ್ಟ್ 29 ರಿಂದ 31ರವರೆಗೆ ಆಯೋಜಿಸಿರುವ ವಾಹನ ಪ್ರದರ್ಶನ ಪ್ರವಾಸ್4.0 ವನ್ನು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘ ಬಹಿಷ್ಕರಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ತಿಳಿಸಿದ್ದಾರೆ.
ಬಸ್ ಮತ್ತು ಕಾರ ಆಪರೇಟರ್ಸ್ ಆ್ ಇಂಡಿಯಾ, 2 ವರ್ಷಕ್ಕೊಮ್ಮೆ ವಾಹನ ಪ್ರದರ್ಶನದ ಹೆಸರಿನಲ್ಲಿ ಹಣದ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಹಲವು ಆರೋಪಗಳನ್ನು ಸದಸ್ಯರುಗಳು ಮಾಡಿದ್ದು,ಈಗಾಗಲೇ ಇವರ ವಿರುದ್ಧ ದೆಹಲಿಯ ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ. ಅದೇ ರೀತಿ ನೀತಿ ಆಯೋಗ ಮತ್ತು ರಿಜಿಸ್ಟರ್ ಆ್ ಸೊಸೈಟಿ ಬಳಿ ಸಹ ಸದಸ್ಯರುಗಳು ದೂರನ್ನು ಸಲ್ಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಕೇವಲ ವಾಹನ ಪ್ರದರ್ಶನವನ್ನು ಮಾಡುವ ಮೂಲಕ ತನ್ನ ಧ್ಯೆಯೋದ್ದೇಶಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದ ಹಲವು ಸದಸ್ಯರುಗಳಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಸಂಸ್ಥೆಯಿಂದ ತೆಗೆದು ಹಾಕಿರುವ ನಿದರ್ಶನಗಳಿವೆ. ಅಲ್ಲದೆ, ಈ ಸಂಸ್ಥೆಯು ಕಳೆದ 3 ಪ್ರದರ್ಶನದ ಯಾವುದೇ ಲೆಕ್ಕಪತ್ರಗಳನ್ನು ತನ್ನ ಸದಸ್ಯರ ಮುಂದೆ ಇಡದಿರುವುದು ಸಹ ದೂರಿನಲ್ಲಿ ಉಲ್ಲೇಖಿತವಾಗಿರುತ್ತದೆ ಎಂದು ಹೇಳಿದ ಅವರು ಕೋಟಿ ಕೋಟಿ ಹಣ ಪಡೆದು ವಸ್ತು ಪ್ರದರ್ಶನ ಏರ್ಪಡಿಸುತ್ತಾರೆ. ಆದರೆ,ಸದಸ್ಯರುಗಳಿಗೆ ಈ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ನೀಡದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ಸಾರಿಗೆ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘವು ಈ ಪ್ರದರ್ಶನದ ವಿರುದ್ಧವಾಗಿ ಧ್ವನಿಯತ್ತಿ, ರಾಜ್ಯದ ಮತ್ತು ದೇಶದ ಇತರ ಸಂಘಗಳ ಜೊತೆಯಲ್ಲಿ ಮಾತನಾಡಿ, ಅಯಾ ಸಂಘಗಳ ಅಭಿಪ್ರಾಯವನ್ನು ಕ್ರೂಢೀಕರಿಸಿ ದಿನಾಂಕ 29,30,31 ರಂದು ನಡೆಯುವ ಪ್ರದರ್ಶನವನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.