ಬುರುಡೆ ಮನ್ ಚಿನ್ನಯ್ಯ ಈಗ ಕೈದಿ ನಂ.1104

burude man chinnayya
Published on

ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿದ್ದ ಬುರುಡೆ ಮನ್ ಅಲಿಯಾಸ್ ಚಿನ್ನಯ್ಯಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ನಂಬರ್ 1104 ನೀಡಲಾಗಿದೆ.

ಶನಿವಾರ ತಡರಾತ್ರಿ 1.30ರ ಸುಮಾರಿಗೆ ಎಸ್‌ಐಟಿಯ ನಾಲ್ವರು ಅಧಿಕಾರಿಗಳು ಚಿನ್ನಯ್ಯನನ್ನು ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕರೆತಂದು ಬಿಟ್ಟು ಹೋಗಿದ್ದು, ಜೈಲಿನ ಅಧಿಕಾರಿಗಳು ಇಲಾಖಾ ಪ್ರಕ್ರಿಯೆ ಪೂರ್ಣಗೊಳಿಸಿ ಚಿನ್ನಯ್ಯಗೆ ಕೈದಿ ಸಂಖ್ಯೆಯನ್ನು ನೀಡಿದರು.

ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಚಿನ್ನಯ್ಯಗೆ ಕೊನೆಗೆ ಎಸ್‌ಐಟಿ ಅಧಿಕಾರಿಗಳೇ ಖೆಡ್ಡಾ ತೋಡಿ ಬಂಧಿಸಿದ್ದು, ವಿಚಾರಣೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾತ್ರಿಯೇ ಶಿವಮೊಗ್ಗಕ್ಕೆ ಅಧಿಕಾರಿಗಳು ಕರೆತಂದರು.

ಎಸ್‌ಐಟಿ ಪೊಲೀಸರು ಭದ್ರತೆಯ ದೃಷ್ಟಿಯಿಂದ ಚಿನ್ನಯ್ಯನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ತಂದು ಬಿಟ್ಟಿದ್ದಾರೆ. ಮುಂದಿನ 14 ದಿನಗಳ ನಂತರ ಚಿನ್ನಯ್ಯನನ್ನು ಮತ್ತೆ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಶಿವಮೊಗ್ಗದ ಜೈಲಿನ ಭದ್ರತೆಯನ್ನು ನೋಡಿಕೊಳ್ಳುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ಚಿನ್ನಯ್ಯನನ್ನು ತಪಾಸಣೆಗೆ ಒಳಪಡಿಸಿ ಜೈಲಿನಲ್ಲಿ ಇಬ್ಬರು ಕೈದಿಗಳಿರುವ ಸೆಲ್ನಲ್ಲಿ ಚಿನ್ನಯ್ಯಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಚಿನ್ನಯ್ಯನಿಗೂ ಸಹ ಇತರೆ ಸಜಾಬಂಧಿಗಳಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net