

ಆದಿಮಾನವರು ಬೆಂಕಿಯನ್ನು ಉಪಯೋಗಿಸಲು ಆರಂಭಮಾಡಿದ್ದು ಕೇವಲ 4-5 ಲಕ್ಷ ವರ್ಷಗಳ ಹಿಂದೆ, ಅದಕ್ಕೂ ಮೊದಲು ಆದಿಮಾನವರಲ್ಲಿ ಯಾವುದೇ ವಸ್ತುವನ್ನು ಸುಡುವ ಅಭ್ಯಾಸ ಇರಲಿಲ್ಲ. ಈಗಲೂ ಕಾಡಿನಲ್ಲಿ ಯಾವುದೇ ಪ್ರಾಣಿ-ಪಕ್ಷಿಗಳು ಸತ್ತರೆ ಅದನ್ನು ಕರಗಿಸುವ ಕೆಲಸವನ್ನು ಈ ಬ್ಯಾಕ್ಟೀರಿಯಾಗಳೇ ಮಾಡುತ್ತವೆ. ಅದನ್ನು ಯಾರೂ ಸುಡುವುದಿಲ್ಲವಲ್ಲ. ಅದೂ ಅಲ್ಲದೆ, ಹೆಣವನ್ನು ಹೂತಾಗ ದೇಹದಲ್ಲಿರುವ ಬ್ಯಾಕ್ಟೀರಿಯಾ ಮತ್ತು ಮಣ್ಣಿನಲ್ಲಿರುವ ಕ್ರಿಮಿ ಕೀಟಗಳು, ನಮ್ಮ ದೇಹವನ್ನು ತಿಂದು ಅದರಲ್ಲಿರುವ ಎಲ್ಲ ರಾಸಾಯನಿಕ ವಸ್ತುಗಳನ್ನು ಕರಗಿಸಿ ಮಣ್ಣಿನಲ್ಲಿರುವ ಇತರ ಹುಳು- ಹುಪ್ಪಟೆಗಳಿಗೆ ಮತ್ತು ಗಿಡ, ಮರಗಳಿಗೆ ಕೊಡುತ್ತವೆ. ಸುಟ್ಟರೆ, ನಮ್ಮ ದೇಹದ ರಾಸಾಯನಿಕ ವಸ್ತುಗಳು ಗಾಳಿಯಲ್ಲಿ ಸೇರಿ ವಾಯುಮಾಲಿನ್ಯವಾಗುತ್ತದೆ. ಆದರೆ, ಇಂದು ನಗರಗಳಲ್ಲಿ ಹೆಣ ಹೂಳಲು ಜಾಗ ಕಡಿಮೆಯಾಗಿ ವಿದ್ಯುತ್ಯುಂತ್ರದ ಸಹಾಯದಿಂದ ಹೆಣ ಸುಡುವ ಸಂದರ್ಭ ಬಂದಿದೆ. ಕ್ರೖೆಸ್ತರಲ್ಲಿ ಹೆಣವನ್ನು ಬಟ್ಟೆ ಸಮೇತ ಪೆಟ್ಟಿಗೆಯಲ್ಲಿಟ್ಟು ಹೂಳುತ್ತಾರೆ. ಮಣ್ಣಿನಲ್ಲಿರುವ ಬೇರೆ ಬೇರೆ ಬ್ಯಾಕ್ಟೀರಿಯಾ ಮತ್ತು ಹಲವಾರು ಕೀಟಗಳು, ಮರದಿಂದ ಮಾಡಿದ ಪೆಟ್ಟಿಗೆ, ಹೆಣಕ್ಕೆ ತೊಡಿಸಿದ ಬಟ್ಟೆ ಮತ್ತು ದೇಹವನ್ನು ಕರಗಿಸಿ, ಅವುಗಳಲ್ಲಿ ಅಡಕವಾಗಿರುವ ಖನಿಜಾಂಶಗಳನ್ನು ಮಣ್ಣಿಗೆ ತಲುಪಿಸುತ್ತವೆ. ಅವುಗಳನ್ನ ಕರಗಿಸುವುದು ಎಂದರೆ ಕೀಟಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಚೆನ್ನಾಗಿ ಊಟ ಸಿಕ್ಕುತ್ತಿದೆ ಎಂದರ್ಥ.