ಎಟಿಎಂಗಳಲ್ಲಿ ಹಣ ಕದಿಯುತ್ತಿದ್ದ ಕಳ್ಳನ ಬಂಧನ

atm
Published on

ಚೆನ್ನೈ: ಎಟಿಎಂ ಕೇಂದ್ರಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಕೊಯಮತ್ತೂರು ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ತಂಬಿರಾಜ್ ಬಂಧಿತ. ಈತನ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದಲ್ಲಿ ಕಳ್ಳತನ ಪ್ರಕರಣಗಳು ಇರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಥೇಣಿ ಜಿಲ್ಲೆಯ ಬೋಡಿನಾಯಕನೂರಿನ ಬಳಿಯ ಜಕ್ಕಮ್ಮನಾಯಕನಪಟ್ಟಿ ಬಡಾವಣೆಯ ತಂಬಿರಾಜ್ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು ಬಂದವರಿಂದ ಎಟಿಎಂ ಕಾರ್ಡ್​ ಪಡೆದು ಸರಿಯಾಗಿ ಎಟಿಎಂನಿಂದ ಡ್ರಾ ಮಾಡಿ ಕೊಡುವುದಾಗಿ ಹೇಳಿ ಹಣ ಕದಿಯುತ್ತಿದ್ದ.

ಎಟಿಎಂ ಕಾರ್ಡ್ ಹೊಂದಿರುವವರು ತಮ್ಮ ಖಾತೆಯಿಂದ ತಾವು ಹೇಳಿದ್ದಕ್ಕಿಂತ ಹೆಚ್ಚು ಹಣ ಡ್ರಾ ಆಗಿರುವುದು ತಿಳಿದು ಕಂಗಾಲಾಗಿದ್ದಾರೆ.

ಈ ರೀತಿ ತಂಬಿರಾಜ್ ನಾಲ್ಕೂ ರಾಜ್ಯಗಳಲ್ಲಿ ಕಳ್ಳತನ ಮಾಡಿ ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ. ಇತ್ತೀಚೆಗಷ್ಟೇ ತಂಬಿರಾಜ್ ಎಟಿಎಂ ಕೇಂದ್ರದಲ್ಲಿ ಕಳ್ಳತನ ಮಾಡುತ್ತಿರುವ ವಿಡಿಯೋ ಸಿಸಿ ಕ್ಯಾಮರಾ ಮೂಲಕ ಪೊಲೀಸರಿಗೆ ಸಿಕ್ಕಿತ್ತು. ಆ ವಿಡಿಯೋದ ಆಧಾರದ ಮೇಲೆ ಕೊಯಮತ್ತೂರು ಕ್ರೈಂ ಬ್ರಾಂಚ್ ಪೊಲೀಸರು ತಂಬಿರಾಜ್ ನನ್ನು ಗುರುತಿಸಿದ್ದಾರೆ.

ಎರಡು ದಿನಗಳ ಹಿಂದೆ ತಂಬಿರಾಜ್ ಸ್ವಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಪೊಲೀಸರು ಶುಕ್ರವಾರ ಬೆಳಗ್ಗೆ ಅವನ ಮನೆಗೆ ತೆರಳಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net