

ವಿಜಯಪುರ: ಗಡಿಭಾಗದ ಕನ್ನಡ ಶಾಲೆಗಳಿಗೆ ಉಚಿತವಾಗಿ ಪತ್ರಿಕೆ ತಲುಪಿಸುವ ಗಡಿನಾಡು ಪತ್ರಿಕೆಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಘೋಷಿಸಿದರು.
ಗಡಿಭಾಗದ ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಗಡಿನಾಡು ಪತ್ರಿಕೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸಂಕಷ್ಟದಲ್ಲಿರುವ ಗಡಿನಾಡು ಪತ್ರಿಕೆಗಳ ಮಾಲೀಕರು ಸದ್ಯ ಗಡಿಭಾಗದ ಶಾಲೆಗಳಿಗೆ ಉಚಿತವಾಗಿ ಪತ್ರಿಕೆ ತಲುಪಿಸಿದರೆ ಅದರ ಹಣವನ್ನು ಪ್ರಾಧಿಕಾರದಿಂದ ಭರಿಸಲಾಗುವುದು. ಈ ಬಗ್ಗೆ ಸಭೆ ನಡೆಸಿ, ಚರ್ಚಿಸಿ ಒಂದೊಳ್ಳೆಯ ನಿರ್ಧಾರ ಕೂಡ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಗಡಿನಾಡು ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗಡಿನಾಡು ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಗಡಿನಾಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸರ್ಕಾರ ಬಿಡುಗಡೆಗೊಳಿಸುವ ಅನುದಾನದಲ್ಲಿ ಸಿಂಹಪಾಲು ಶಾಲೆಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತಿದೆ. ಇದೀಗ ನಲಿ-ಕಲಿ ಕಲಿಕಾ ಸಾಮಗ್ರಿ ಕೂಡ ನೀಡಲಾಗುತ್ತಿದೆ ಎಂದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸಲಾಗಿದೆ. ಹೀಗಾಗಿ ಕನ್ನಡಪರ ಸಂಘಟಕರು ಹಾಗೂ ಪಾಲಕ- ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಶಿಕ್ಷಕರಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿ ಮಹಾರಾಷ್ಟ್ರ ದ ಕನ್ನಡ ಶಾಲೆಗಳಿಗೆ ನಲಿ- ಕಲಿ ಕಲಿಕಾ ಸಾಮಗ್ರಿ ಪೂರೈಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ಶಿಕ್ಷಕರು ಎಷ್ಟು ಬೇಕು ಎಂಬುದರ ಕುರಿತು ಮಾಹಿತಿ ಕಲೆ ಹಾಕಲು ತಿಳಿಸಲಾಗಿದೆ. ಒಟ್ಟಾರೆ ಗಡಿಭಾಗದ ಕನ್ನಡಿಗರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲೀಕಾರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಎಂ.ಎಸ್. ಮದಬಾವಿ ಇದ್ದರು.