ಬಂಪರ್​ ಆಫರ್​...15 ನಿಮಿಷದಲ್ಲಿ ಎಷ್ಟು ಹಣ ಎಣಿಸುತ್ತಾರೋ ಅಷ್ಟೂ ಹಣ ಅವರಿಗೇನೆ! Bumper Offer

Bumper Offer
Published on

Bumper Offer : ಚೀನಾದ ಹೆನಾನ್ ಮೈನ್ ಕ್ರೇನ್ ಕಂಪನಿ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಅದ್ಭುತ ಬೋನಸ್ ಆಫರ್ ಘೋಷಿಸಿದ್ದು, ತನ್ನ ಉದ್ಯೋಗಿಗಳಿಗೆ ವಾರ್ಷಿಕ ಬೋನಸ್ ಆಗಿ ಒಟ್ಟು 70 ಕೋಟಿ ರೂ.ಗಳನ್ನು ನೀಡಿದೆ. ಆದಾಗ್ಯೂ, ಈ ಕಂಪನಿಯ ಆಡಳಿತ ಮಂಡಳಿ, ಬೋನಸ್ ನೀಡುವ ಪ್ರಕ್ರಿಯೆಯನ್ನು ಬಹಳ ವಿಭಿನ್ನವಾಗಿ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಆಯೋಜಿತ್ತು.

ಬೋನಸ್​ ಮೊತ್ತವನ್ನು ಹೇಗೆ ವಿತರಿಸಲಾಯಿತು ಅಂದರೆ, ಸಂಪೂರ್ಣ ಬೋನಸ್ ಹಣವನ್ನು 60 ರಿಂದ 70 ಮೀಟರ್ ಉದ್ದದ ಮೇಜಿನ ಮೇಲೆ ಸುರಿಯಲಾಯಿತು. ನಂತರ ಉದ್ಯೋಗಿಗಳನ್ನು 30 ತಂಡಗಳಾಗಿ ವಿಂಗಡಿಸಲಾಯಿತು. ಬಳಿಕ ಪ್ರತಿ ತಂಡದಿಂದ ಇಬ್ಬರು ಜನರನ್ನು ಆಯ್ಕೆ ಮಾಡಿ 15 ನಿಮಿಷಗಳನ್ನು ನೀಡಲಾಯಿತು.

15 ನಿಮಿಷಗಳಲ್ಲಿ ಎಷ್ಟು ಹಣ ಎಣಿಸುತ್ತಾರೋ ಅಷ್ಟೂ ಹಣವನ್ನು ಆ ತಂಡಕ್ಕೆ ನೀಡಲಾಯಿತು. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೌಕರರು ನೋಟುಗಳ ದೊಡ್ಡ ಬಂಡಲ್‌ಗಳನ್ನು ಎಣಿಸುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು.

ಅಂದಹಾಗೆ ಇದೇನು ಮೊದಲ ಬಾರಿ ಮಾಡುತ್ತಿಲ್ಲ. ಹೆನಾನ್ ಮೈನ್ ಕ್ರೇನ್ ಕಂಪನಿಯು ಈ ಹಿಂದೆ 2023ರ ಜನವರಿ ತಿಂಗಳಲ್ಲಿ ತನ್ನ ಉದ್ಯೋಗಿಗಳಿಗೆ 70 ಕೋಟಿ ರೂಪಾಯಿ ಬೋನಸ್​ ಅನ್ನು ಇದೇ ರೀತಿ ನೀಡಿತ್ತು. ಕಂಪನಿಯ ಉದ್ಯೋಗಿಗಳ ಪ್ರಯತ್ನಗಳನ್ನು ಗುರುತಿಸಲು ಮತ್ತು ಅವರನ್ನು ಮತ್ತಷ್ಟು ಪ್ರೇರೇಪಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಕಂಪನಿಯು ನಂಬಿದೆ.

ಇಂತಹ ಬೋನಸ್ ಯೋಜನೆಗಳು ಉದ್ಯೋಗಿಗಳ ನೈತಿಕತೆಯನ್ನು ಹೆಚ್ಚಿಸುವುದಲ್ಲದೆ ಕಂಪನಿಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಈ ಅವಕಾಶ ನಿಮಗೇನಾದರೂ ಸಿಕ್ಕರೆ 15 ನಿಮಿಷಗಳಲ್ಲಿ ನೀವು ಎಷ್ಟು ಹಣವನ್ನು ಎಣಿಸಬಹುದೆಂದು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net