ಜಗತ್ತಿನ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ನಿಫ್ಟಿ ಸೂಚ್ಯಂಕ

stock-3
Published on

ಮುಂಬೈ: ಹೂಡಿಕೆದಾರರು ಐಟಿ, ಆಟೋಮೊಬೈಲ್ ಮತ್ತು ತಂತ್ರಜ್ಞಾನ ಷೇರುಗಳಲ್ಲಿ ಖರೀದಿ ಭರಾಟೆಯಲ್ಲಿ ತೊಡಗಿದ್ದರಿಂದ ನಿಫ್ಟಿ ತನ್ನ ತಾಜಾ ಸಾರ್ವಕಾಲಿಕ ಗರಿಷ್ಠ ಮಟ್ಟ ಮತ್ತು ಸೆನ್ಸೆಕ್ಸ್ 500 ಅಂಕಗಳಿಗಿಂತ ಹೆಚ್ಚು ಏರಿಕೆಯೊಂದಿಗೆ ಗುರುವಾರ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಚೇತರಿಸಿಕೊಂಡವು.

ಗುರುವಾರ ಮಾರುಕಟ್ಟೆ ವಹಿವಾಟು ಕುಸಿತದೊಂದಿಗೆ ಆರಂಭವಾಯಿತು. ಮಧ್ಯಾಹ್ನ ಚೇತರಿಕೆ ಕಂಡಿತು. ವಿಶೇಷವಾಗಿ ಮಧ್ಯಾಹ್ನ 2.30 ರ ನಂತರ 30-ಷೇರು ಬೆಂಚ್‌ಮಾರ್ಕ್ ಸೆನ್ಸೆಕ್ಸ್ 535.15 ಅಂಕವಗಳು ಅಥವಾ 0.74 ರಷ್ಟು ಏರಿಕೆಯಾಗಿ 73,158.24 ಅಂಕಗಳನ್ನು ಮುಟ್ಟಿತು. ಈ 30 ಷೇರುಗಳ ಪೈಕಿ 22 ಷೇರುಗಳ ಬೆಲೆ ಏರಿಕೆ ಕಂಡಿತು.

ನಿಫ್ಟಿ ಸೂಚ್ಯಂಕವು 162.40 ಅಂಕಗಳು ಅಥವಾ ಶೇಕಡಾ 0.74 ರಷ್ಟು ಏರಿ, 22,217.45 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ ಈ ಸೂಚ್ಯಂಕವು 22,252.50 ಅಂಕಗಳ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ನಿಫ್ಟಿ ಸೂಚ್ಯಂಕದ 50 ಷೇರುಗಳ ಪೈಕಿ 25 ಷೇರುಗಳ ಬೆಲೆ ಏರಿಕೆ ಕಂಡಿತು.

"ಭಾರತದ ಆರ್ಥಿಕ ಚಟುವಟಿಕೆಯು ಫೆಬ್ರವರಿಯಲ್ಲಿ ವಿಸ್ತರಣೆಯನ್ನು ಮುಂದುವರಿಸಿದ್ದರಿಂದ ವಿಶಾಲ ಮಾರುಕಟ್ಟೆಯು ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ, ಸೇವೆ ಮತ್ತು ಉತ್ಪಾದನೆ ಈ ಎರಡರಲ್ಲೂ ಸುಧಾರಣೆಯಾಗಿದೆ. ಪರಿಣಾಮವಾಗಿ, ಇದು ವಿವೇಚನಾಯುಕ್ತ ಷೇರುಗಳು ಮತ್ತು ಬಂಡವಾಳ ಸರಕುಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಗೆ ಕಾರಣವಾಯಿತು" ಎಂದು ಜಿಯೋಜಿತ್ ಫೈನಾನ್ಶಿಯಲ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.92, ಲಾರ್ಜ್‌ಕ್ಯಾಪ್ ಸೂಚ್ಯಂಕ ಶೇಕಡಾ 0.81 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.54 ರಷ್ಟು ಏರಿತು.

ಸೂಚ್ಯಂಕ ಷೇರುಗಳಲ್ಲಿ ಎಚ್‌ಸಿಎಲ್‌ಟೆಕ್ ಷೇರು ಬೆಲೆ ಗರಿಷ್ಠ ಶೇಕಡಾ 3.12 ರಷ್ಟು ಏರಿತು. ನಂತರ ಐಟಿಸಿ ಶೇಕಡಾ 2.73 ರಷ್ಟು ಮತ್ತು ಎಂ & ಎಂ ಶೇಕಡಾ 2.61 ರಷ್ಟು ಏರಿಕೆಯಾಗಿದೆ. ಟಿಸಿಎಸ್ ಷೇರು ಬೆಲೆ ಶೇ. 2.44ರಷ್ಟು ಏರಿಕೆ ಕಂಡಿದೆ. ಟೆಕ್ ಮಹೀಂದ್ರಾ, ವಿಪ್ರೋ, ಎಲ್ & ಟಿ ಮತ್ತು ಮಾರುತಿ ಕಂಪನಿಗಳ ಷೇರುಗಳು ಕೂಡ ಲಾಭ ಗಳಿಸಿದವು.

ಇಂಡಸ್‌ಇಂಡ್ ಬ್ಯಾಂಕ್ ಶೇಕಡಾ 1.87 ರಷ್ಟು ಕುಸಿತ ಕಂಡಿತು. ಎಲ್ಲಾ ಪ್ರಮುಖ ಬ್ಯಾಂಕ್‌ಗಳ ಷೇರುಗಳ ಬೆಲೆ ಇಳಿಕೆಯಾಯಿತು. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.28ರಷ್ಟು ಕುಸಿದರೆ, ಕೊಟಕ್ ಮಹೀಂದ್ರಾ ಬ್ಯಾಂಕ್ ಶೇ.1.11ರಷ್ಟು ಮತ್ತು ಎಸ್‌ಬಿಐ ಶೇ.0.73ರಷ್ಟು ಕುಸಿದವು. ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳ ಬೆಲೆ ಹಿನ್ನಡೆ ಕಂಡವು.

ಏಷ್ಯಾದ ಮಾರುಕಟ್ಟೆಗಳ ಪೈಕಿ, ಜಪಾನ್‌ನ Nikkei 225 ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತು. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ಕೂಡ ತೀವ್ರ ಲಾಭದೊಂದಿಗೆ ಕೊನೆಗೊಂಡವು. ಐರೋಪ್ಯ ಮಾರುಕಟ್ಟೆಗಳು ಕೂಡ ಲಾಭದೊಂದಿಗೆ ವಹಿವಾಟು ನಡೆಸಿದವು.

ಬುಧವಾರ, ಬಿಎಸ್​ಇ ಸೂಚ್ಯಂಕ 434.31 ಅಂಕ ಕುಸಿದು 72,623.09 ಅಂಕಗಳಿಗೆ ತಲುಪಿದ್ದರೆ, ನಿಫ್ಟಿಯು 141.90 ಅಂಕ ಕುಸಿದು 22,055.05 ಅಂಕಗಳಿಗೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 284.66 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net