

ಉತ್ತರಕನ್ನಡ: ವಾಹನದ ಹಾರ್ನ್ ಶಬ್ದಕ್ಕೆ ಎತ್ತುಗಳು ಬೆದರಿ ಓಡಿದ್ದರಿಂದ ಚಕ್ಕಡಿ ಬಂಡಿ ಕಂದಕಕ್ಕೆ ಉರುಳಿ, ಅದರಲ್ಲಿ ಸಾಗುತ್ತಿದ್ದ ಭಕ್ತ ಸಾವಿಗೀಡಾಗಿದ್ದಾನೆ. ದಾಂಡೇಲಿಯ ಜನತಾ ಕಾಲನಿ ಬಳಿ ಈ ದುರಂತ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ನಿವಾಸಿ ಈರಣ್ಣ ಧೂಪದಾಳ (21) ಸಾವಿಗೀಡಾದ ಭಕ್ತ. ಈತ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಜಾತ್ರೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಚಕ್ಕಡಿ ಬಂಡಿ ಜೊಯಿಡಾ ಮಾರ್ಗವಾಗಿ ದಾಂಡೇಲಿ ಕಡೆಗೆ ಸಾಗುತ್ತಿದ್ದು, ಮಾರ್ಗಮಧ್ಯೆ ವಾಹನದ ಹಾರ್ನ್ಗೆ ಎತ್ತುಗಳು ಬೆದರಿ ಕಂದಕದ ಕಡೆಗೆ ಓಡಿವೆ. ಆಗ ಚಕ್ಕಡಿ ಪಲ್ಟಿಯಾಗಿದ್ದು, ಕೆಳಕ್ಕೆ ಬಿದ್ದ ಈರಣ್ಣನ ಮೈಮೇಲೇ ಗಾಲಿ ಹಾದುಹೋಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ. ಜಿಲ್ಲಾಡಳಿತವು ಉಳವಿಗೆ ಚಕ್ಕಡಿ ಗಾಡಿ ನಿಷೇಧಿಸಿದ್ದರೂ ಇವರು ಅದರಲ್ಲೇ ಸಾಗಿದ್ದರು. ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.