

ಬೆಂಗಳೂರು: ಮೂಡಾ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಅವರಿಗೆ ಬುಲೆಟ್ ಪ್ರೂಫ್ ಕಾರು ಮತ್ತು ಝೆಡ್ ಶ್ರೇಣಿಯ ಭದ್ರತೆಯನ್ನ ಪೊಲೀಸರು ಒದಗಿಸಿದ್ದಾರೆ.
ರಾಜ್ಯಪಾಲರ ಮೇಲೆ ಕೆಲವು ಸಮಾಜಘಾತುಕ ಶಕ್ತಿಗಳು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅವರಿಗೆ ಬುಲೆಟ್ ಪ್ರೂಫ್ (ಗುಂಡು ನಿರೋಧಕ) ಕಾರು ಒದಗಿಸುವಂತೆ ಕೇಂದ್ರ ಗುಪ್ತಚರ ವಿಭಾಗವು ರಾಜ್ಯ ಗೃಹ ಇಲಾಖೆಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಪಾರಿಗೆ ಇದೀಗ ಬುಲೆಟ್ ಪ್ರೂಫ್ ಕಾರು ಹಾಗೂ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಇನ್ನು ರಾಜ್ಯಪಾಲರು ಯಾವುದಾದರೂ ಸಭೆ ಸಮಾರಂಭ ಮತ್ತಿತರ ಕಾರ್ಯಕ್ರಮಗಳಿಗೆ ತೆರಳುವ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆಯೂ ಸೂಚನೆ ನೀಡಲಾಗಿದೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ರಾಜ್ಯಪಾಲರ ನಿರ್ಧಾರ ಖಂಡಿಸಿ ಕಾಂಗ್ರೆಸ್ ಸೇರಿ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸಲು ಮುಂದಾಗಿದ್ದಾರೆ. ಅಲ್ಲದೆ, ಝೆಡ್ ಶ್ರೇಣಿಯ ಭದ್ರತೆಯನ್ನು ಪೊಲೀಸರು ಅವರಿಗೆ ಒದಗಿಸಲಾಗಿದೆ. ಕೆಲ ಕಾಂಗ್ರೆಸ್ ನಾಯಕರು ರಾಜಭವನಕ್ಕೆ ನುಗ್ಗುವುದಾಗಿ ಹೇಳಿಕೆ ನೀಡಿದ್ದಾರೆ. ಇನ್ನು ಕೆಲ ನಾಯಕರು ಕಾನೂನು ಸುವ್ಯವಸ್ಥೆ ಧಕ್ಕೆಯಾದರೆ ಅದಕ್ಕೆ ರಾಜ್ಯಪಾಲರೇ ನೇರ ಹೊಣೆ ಎಂಬಂತಹ ಹೇಳಿಕೆ ನೀಡುತ್ತಿದ್ದಾರೆ. ಗೆಹ್ಲೊಟ್ ಅವರು, ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗಿನಿಂದ ಸಾಮಾನ್ಯ ಕಾರಿನಲ್ಲೇ ಓಡಾಡುತ್ತಿದ್ದರು. ಆದರೀಗ ಬುಲೆಟ್ ್ರೂಪ್ ಕಾರಿನಲ್ಲಿ ಓಡಾಡಲು ಆರಂಭಿಸಿದ್ದಾರೆ. ಇದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಾರ್ವಜನಿಕ ಕಾರ್ಯಕ್ರಮಕ್ಕೆ ಗೈರು?
ಆ. ೨೯ರವರೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಕೇಂದ್ರ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬುಧವಾರ ನಡೆದ ನೃಪತುಂಗ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಗೈರಾಗಿದ್ದರು.
ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಅರ್ಜಿಯ ವಿಚಾರಣೆ ೨೯ ಮುಂದೂಡಿಕೆಯಾಗಿದೆ. ಅಲ್ಲಿವರೆಗೂ ಯಾವುದೇ ರೀತಿ ಕ್ರಮ ಕೈಗೊಳ್ಳಬಾರದೆಂದು ನ್ಯಾಯಾಲಯವು ನಿರ್ದೇಶನ ನೀಡಿದ್ದೆ. ಹೀಗಾಗಿ ರಾಜ್ಯಪಾಲರು ಅಲ್ಲಿಯವರೆಗೂ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇಲ್ಲ. ಅಪರೂಪದ ಸಂದರ್ಭದಲ್ಲಿ ಮಾತ್ರ ಅತಿ ಗಣ್ಯ ವ್ಯಕ್ತಿಗಳಿಗೆ ಬುಲೆಟ್ ಪ್ರೂಫ್ ಕಾರು ಒದಗಿಸಲಾಗುತ್ತಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಪ್ರಾಣ ಬೆದರಿಕೆ ಇರುವ ಗಣ್ಯರಿಗೆ ಮಾತ್ರ ಬುಲೆಟ್ ್ರೂಪ್ ಕಾರು ನೀಡಲಾಗುತ್ತದೆ. ರಾಜ್ಯಪಾಲರ ವಿರುದ್ದ ಕೆಲವು ಸಂಘಟನೆಗಳು ತೀವ್ರ ಆಕ್ರೊಶಗೊಂಡಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.