

ತಿ.ನರಸೀಪುರ: ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುಂಡುಗಳು ನಾಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಖ್ಯಪೇದೆ ರೈಟರ್ ಕೃಷ್ಣೇಗೌಡ ಹಾಗೂ ನಿಂಗರಾಜು ಅವರನ್ನು ಅಮಾನತು ಮಾಡಲಾಗಿದೆ. ಇದರಿಂದ ವಿಚಲಿತನಾದ ಕೃಷ್ಣೇಗೌಡ ಆತ್ಮಹತ್ಯೆ ಮಾಡಿಕೊಂಡಂತೆ ಸನ್ನಿವೇಶ ಸೃಷ್ಟಿಸಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ 50 ಜೀವಂತ ಗುಂಡುಗಳು ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಜತೆಗೆ ಗುಂಡು ವಶದಲ್ಲಿಟ್ಟುಕೊಂಡು ಸರಿಯಾದ ಲೆಕ್ಕ ಇಡಬೇಕಾಗಿದ್ದ ರೈಟರ್ ಕೃಷ್ಣೇಗೌಡ ಹಾಗೂ ನಿಂಗರಾಜು ಮೇಲೂ ಅನುಮಾನ ಇತ್ತು. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿತ್ತು. ಬುಧವಾರ ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಮಾನತು ಆದೇಶ ಹೊರಬೀಳುತ್ತಿದ್ದಂತೆ ವಿಚಲಿತನಾದ ಕೃಷ್ಣೇಗೌಡ, ತನ್ನ ದ್ವಿಚಕ್ರವಾಹನದಲ್ಲಿ ತಾಲೂಕಿನ ಮನ್ನೇಹುಂಡಿ ಗ್ರಾಮದ ನದಿ ದಂಡೆಗೆ ತೆರಳಿ ಬಟ್ಟೆಗಳನ್ನು ಕಳಚಿ ಸ್ಕೂಟರ್ ಮೇಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡಂತೆ ಸನ್ನಿವೇಶ ಸೃಷ್ಟಿಸಿದ್ದಾನೆ.
ಬಳಿಕ ಅಲ್ಲಿಂದ ನದಿ ದಂಡೆಯಲ್ಲೇ ಕಾಲ್ನಡಿಗೆಯಲ್ಲಿ ಹೋಗಿ ಹುಣಸೂರು ಗ್ರಾಮದಲ್ಲಿ ಹುಲ್ಲಿನ ಮೆದೆಯೊಂದರಲ್ಲಿ ಅವಿತು ಕುಳಿತು ತನ್ನ ಸಂಬಂಧಿಕರಿಗೆ ಕಾರು ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಕಾರಿನಲ್ಲಿ ಅಲ್ಲಿಂದ ಪರಾರಿಯಾಗಲು ಸಂಚು ರೂಪಿಸಿದ್ದಾನೆ. ಕೃಷ್ಣೇಗೌಡನ ವರ್ತನೆಯನ್ನು ಗಮನಿಸಿದ ಗ್ರಾಮಸ್ಥರು ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ತೀವ್ರ ಹುಡುಕಾಟದ ನಂತರ ಹುಲ್ಲಿನ ಮೆದೆಯಲ್ಲಿ ಅರೆಬೆತ್ತಲೆಯಾಗಿ ಅವಿತು ಕುಳಿತಿದ್ದ ಆತನನ್ನು ವಶಕ್ಕೆ ಪಡೆಯಿತು. ನಂತರ ಪಟ್ಟಣ ಠಾಣೆಗೆ ಕರೆ ತಂದು ಠಾಣೆಯ ಮುಖ್ಯದ್ವಾರ ಬಂದ್ ಮಾಡಿ ವಿಚಾರಣೆ ನಡೆಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆತನನ್ನು ಕರೆದೊಯ್ಯಲಾಯಿತು.
ಇತ್ತೀಚೆಗೆ ವಿಜಯವಾಣಿ ಆಯೋಜಿಸಿದ್ದ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ಕೃಷ್ಣೇಗೌಡ ವಿರುದ್ಧ ಹಲವು ದೂರುಗಳು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.