13ರ ಬಾಲೆಯಲ್ಲಿ ಅನುರಕ್ತನಾದ 55 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಮಾಡಿದ್ದೇನು ನೋಡಿ...

murder1
Published on

ನವದೆಹಲಿ: ಆತನಿಗೆ 55 ವರ್ಷ. ಆದರೂ 13ರ ಬಾಲೆಯನ್ನು ಮದುವೆಯಾಗುವ ಕನಸು. ಆದರೆ, ವಯಸ್ಸಿನ ಅಂತರ ಹೆಚ್ಚಾಗಿರುವ ಕಾರಣ ಮತ್ತು ಬಾಲಕಿ ಅಪ್ರಾಪ್ತೆ ಎಂಬ ಕಾರಣಕ್ಕೆ ಬಾಲಕಿಯ ಸಂಬಂಧಿಯೂ ಆಗಿದ್ದ 48 ವರ್ಷದ ಗಾರೆ ಕೆಲಸದವನು ವಿರೋಧ ವ್ಯಕ್ತಪಡಿಸಿದ. ಈ ಕಾರಣಕ್ಕಾಗಿ 55 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಗಾರೆ ಕೆಲಸದವನನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದಾನೆ.

ದೆಹಲಿ ನಿವಾಸಿ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಅರ್ಜುನ್​ ಸಿಂಗ್ (55) ಹತ್ಯೆ ಮಾಡಿದವನು. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಕೆಲವು ತಿಂಗಳಿಂದ ಈತ ಹತನಾದ ಗಾರೆ ಕೆಲಸದವನು ಸೇರಿ ಹಲವರೊಂದಿಗೆ ಸಬೌಲಿ ರಸ್ತೆಯ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ. ತನ್ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಗಾರೆ ಕೆಲಸದವನ 13 ವರ್ಷದ ಬಾಲಕಿಯಲ್ಲಿ ಅನುರಕ್ತನಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆಯ ಬಳಿ ಹೋದ ಈತ ಮದುವೆಯ ಪ್ರಸ್ತಾಪ ಇರಿಸಿದ್ದ. ಆದರೆ, ಬಾಲಕಿಯ ತಂದೆ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದ. ಈ ಹಿನ್ನೆಲೆಯಲ್ಲಿ ಅರ್ಜುನ್​ ಸಿಂಗ್​ ಇದೀಗ ಹತನಾಗಿರುವ ಬಾಲಕಿಯ ಸಂಬಂಧಿಯನ್ನು ಸಂಪರ್ಕಿಸಿ, ಬಾಲಕಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಬಾಲಕಿಯ ತಂದೆಯ ಮನವೊಲಿಸಲು ಸಹಾಯ ಮಾಡೆಂದು ಸೋಮವಾರ ಮನವಿ ಮಾಡಿಕೊಂಡಿದ್ದ. ಈ ಪ್ರಸ್ತಾಪಕ್ಕೆ ಬಾಲಕಿಯ ತಂದೆಯನ್ನು ಒಪ್ಪಿಸಿದರೆ ಹಣ ಕೊಡುವುದಾಗಿಯೂ ಆಸೆ ತೋರಿಸಿದ್ದ ಎಂದು ಹೇಳಿದ್ದಾರೆ.

ಈ ವಿಷಯ ಕೇಳುತ್ತಲೇ ಕಿಡಿ ಕಿಡಿಯಾದ ಆ ವ್ಯಕ್ತಿ, ನಿನ್ನ ವಯಸ್ಸೇನು, ಆ ಬಾಲಕಿಯ ವಯಸ್ಸೇನು? ಮೊಮ್ಮಗಳಂತೆ ಇರುವ ಆ ಬಾಲಕಿಯನ್ನು ಮದುವೆಯಾಗುತ್ತೇನೆ ಅನ್ನುತ್ತೀಯಲ್ಲ ನಿನಗೆ ಬುದ್ಧಿ ಬೇಡವೇ ಎಂದು ಬೈದಿದ್ದ. ಇದರಿಂದ ಕೆರಳಿದ ಅರ್ಜುನ್​ ಸಿಂಗ್​ ​ ಕೈಗೆ ಸಿಕ್ಕ ಕಬ್ಬಿಣದ ಸರಳನ್ನು ತೆಗೆದುಕೊಂಡು ಆ ವ್ಯಕ್ತಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಸಾಯಿಸಿದ ಎನ್ನಲಾಗಿದೆ.

ಅಲ್ಲಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಅರ್ಜುನ್​ ಸಿಂಗ್​ನನ್ನು ಗುರುವಾರ ಪತ್ತೆ ಮಾಡಿದ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಉದ್ದೇಶಪೂರ್ವಕ ಕೊಲೆ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net