ಕೌಶಲ ಯುವಸಮೂಹದಿಂದ ಸದೃಢ ದೇಶ ನಿರ್ಮಾಣ

samanvya
ಬದುಕಿನ ಅವಕಾಶಗಳು ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಎಚ್.ಎಂ.ಸುರೇಶ್ ಉದ್ಘಾಟಿಸಿದರು. ಸಮನ್ವಯ ಕಾಶಿ, ನಾಗರಾಜ ನಾಯ್ಕ, ಡಾ. ಕೆ.ಆರ್.ಪ್ರತಿಭಾ, ಡಾ. ಪಿ.ಭಾರತಿದೇವಿ, ಎಸ್.ರಾಜು ನಾಯ್ಕ ಇತರರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳು ಕೌಶಲಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಹೇಳಿದರು.

ಹೊಳೆಹೊನ್ನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಮನ್ವಯ ಟ್ರಸ್ಟ್‌ನಿಂದ ಐಕ್ಯೂಎಸಿ ಉದ್ಯೋಗ ಮತ್ತು ಮಾಹಿತಿ ಕೋಶ, ಕಾಲೇಜು ಶಿಕ್ಷಣ ಇಲಾಖೆ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬದುಕಿನ ಅವಕಾಶಗಳು ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತವು ವಿಶ್ವಗುರುವಾಗುವ ದಿಸೆಯಲ್ಲಿ ಮುನ್ನಡೆಯುತ್ತಿದ್ದು, ಕೌಶಲಯುತ ಯುವ ಸಮೂಹದಿಂದ ಸದೃಢ ಹಾಗೂ ಬಲಿಷ್ಠ ದೇಶದ ನಿರ್ಮಾಣ ಸಾಧ್ಯ. ಯುವಜನರು ಶಿಕ್ಷಣದ ಜತೆಯಲ್ಲಿ ಕೌಶಲ ಕಲಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಯುವಜನರು ಸಮಯದ ಮಹತ್ವ ಅರಿತು ಸದುಪಯೋಗ ಪಡಿಸಿಕೊಳ್ಳಬೇಕು. ಪದವಿ ಹಂತದಲ್ಲಿಯೇ ಗುರಿ ನಿಗಧಿಪಡಿಸಿಕೊಂಡು ಹಂತ ಹಂತವಾಗಿ ಪ್ರಯತ್ನಿಸಬೇಕು. ಗುರುವಿನ ಮಾರ್ಗದರ್ಶನದಲ್ಲಿ ಸರಿಯಾದ ದಾರಿಯಲ್ಲಿ ಮುನ್ನಡೆದರೆ ಬದುಕಿನಲ್ಲಿ ಯಶಸ್ಸು ನಿಶ್ಚಿತ ಎಂದರು.
ಹೊಳೆಹೊನ್ನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಆರ್.ಪ್ರತಿಭಾ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ ಕಲಿಕೆ ಮಹತ್ವ ತಿಳಿಸುವುದು ಅತ್ಯಂತ ಅವಶ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೌಶಲ ಕಲಿಯುವುದರಿಂದ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲು ಸಾಧ್ಯವಿದೆ ಎಂದರು.
ಗ್ರಂಥಪಾಲಕ ನಾಗರಾಜ ನಾಯ್ಕ, ಐಕ್ಯೂಎಸಿ ಸಂಚಾಲಕಿ ಡಾ. ಪಿ.ಭಾರತಿದೇವಿ, ಉದ್ಯೋಗ ಮಾಹಿತಿ ಕೋಶ ಸಂಚಾಲಕ ಡಾ. ಎಸ್.ರಾಜುನಾಯ್ಕ, ಸಮನ್ವಯ ಟ್ರಸ್ಟ್ ಸ್ವಯಂ ಸೇವಕ ಸಂತೋಷ್ ಎನ್.ಶೇಟ್ ಉಪಸ್ಥಿತರಿದ್ದರು.
ಎಸ್‌ಬಿಐ ಹಿರಿಯ ಅಧಿಕಾರಿ ಪುನೀತ್ ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತೆ ಸೌಮ್ಯ ಗುರುರಾಜ್, ಕೃಷಿಕ ದುರ್ಗಪ್ಪ ಅಂಗಡಿ, ಗ್ಯಾಲಗರ್ ಎಚ್‌ಆರ್ ಅಧಿಕಾರಿ ಅವಿನಾಶ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net