

ಸಾಗರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಸದೃಢ ಭವಿಷ್ಯ ರೂಪಿಸಿಕೊಳ್ಳುವ ಜತೆಯಲ್ಲಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ತಾಲೂಕು ಪೈಂಟ್ ಗುತ್ತಿಗೆದಾರರು ಹಾಗೂ ಕೆಲಸಗಾರರ ಕ್ಷೇಮಾಭಿವೃದ್ದಿ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಶ್ರಮಿಕ ವರ್ಗದವರ ಮಕ್ಕಳು ಶ್ರಮಿಕರಾಗಬೇಕೆಂಬ ನಿಯಮವಿಲ್ಲ. ಒಳ್ಳೆಯ ಶಿಕ್ಷಣ ನೀಡಲು ಆದ್ಯತೆ ನೀಡಿ, ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಮಕ್ಕಳಿಗೆ ನಿಮ್ಮ ಪ್ರೋತ್ಸಾಹ ಅತ್ಯಂತ ಮುಖ್ಯ ಎಂದು ತಿಳಿಸಿದರು.
ತಾಲೂಕು ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಮಾತನಾಡಿ, ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಶ್ರಮಿಕ ವರ್ಗ ಪೈಂಟರ್‌ಗಳಾಗಿದ್ದು, ಸಂಘಟಿತರಾಗುವುದು ಅಗತ್ಯ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ನಿಮ್ಮ ಪರ ನಮ್ಮ ಸಂಘಟನೆ ಇರುತ್ತದೆ ಎಂದರು.
ಕಾರ್ಮಿಕರಿಗೆ ವಿಮಾ ಪಾಲಿಸಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ರಾಜು ಬಿ. ಮಡಿವಾಳ, ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂರ್ತಿ, ಕಾರ್ಮಿಕ ನಿರೀಕ್ಷಕಿ ಶಿಲ್ಪಾ, ಶ್ರೀನಿವಾಸ್ ಮೇಸ್ತ್ರಿ, ರಾಬರ್ಟ್ ಗೋಮ್ಸ್, ಕೆ.ಎಸ್.ಗೌತಮ್, ವಿ.ಶಂಕರ್, ಜೆ.ಕೆ.ಶ್ರೀನಿವಾಸ್, ಮಂಜು ಭಟ್, ಹರೀಶ್ ಇತರರಿದ್ದರು.