

ಕಾರವಾರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರವನ್ನು ಸ್ವಾತಂತ್ರ್ಯದ ಮರುದಿನವೇ ತೆಗೆದುಕೊಳ್ಳಬೇಕಿತ್ತು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಮರುದಿನವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮಮಂದಿರ ನಿರ್ಮಾಣವಾಗದಂತೆ ನೋಡಿಕೊಳ್ಳಲು "ಅದೇ ಶಕ್ತಿಗಳು" ಕೊನೆಯ ಕ್ಷಣದವರೆಗೂ ಪ್ರಯತ್ನಿಸಿದವು. ಕೊನೆಯ ದಿನವೂ ನ್ಯಾಯಾಲಯದ ಮೊರೆ ಹೋಗಿದ್ದವು ಎಂದು ಹೇಳಿದರು.
ರಾಮಮಂದಿರ ನಿರ್ಮಾಣ ಮಾಡಬಾರದು ಎಂದು ಕಾಂಗ್ರೆಸ್ ಮತ್ತು ಅದರ ಕೂಟ 70 ವರ್ಷಗಳಿಂದ ಪ್ರಯತ್ನಿಸುತ್ತಿದೆ. ರಾಮ ಮಂದಿರದ ಟ್ರಸ್ಟಿಗಳು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಒಡ್ಡಿದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ, ಅವರ ಮನೆಗಳಿಗೆ ತೆರಳಿ ಆಹ್ವಾನಿಸಿದರು.
ಆದರೆ ಅವರು (ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು) ರಾಮ ಮಂದಿರ ಉದ್ಘಾಟನಾ ಆಹ್ವಾನವನ್ನು ತಿರಸ್ಕರಿಸಿದರು. ರಾಮಮಂದಿರದ ಆಹ್ವಾನವನ್ನು ತಿರಸ್ಕರಿಸಿದವರನ್ನು ದೇಶ ತಿರಸ್ಕರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.