ರೈಲ್ವೆ ಹಳಿ ತಡೆಗೋಡೆ ನಿರ್ಮಿಸಿ

22han-6
Published on

ಹನಗೋಡು: ಕಾಡಾನೆಗಳ ಉಪಟಳದಿಂದ ಕಂಗಾಲಾಗಿರುವ ನಾಗರಹೊಳೆ ಉದ್ಯಾನದಂಚಿನಲ್ಲಿರುವ ಕಿಕ್ಕೇರಿಕಟ್ಟೆ, ಬೆಕ್ಕೆಶೆಡ್, ಹೆಬ್ಬಳ್ಳ ಸೇರಿದಂತೆ ಹಲವು ಗ್ರಾಮಗಳಿಗೆ ತಹಸೀಲ್ದಾರ್ ಬಸವರಾಜ್, ಆರ್‌ಎಫ್‌ಒ ಹನುಮಂತರಾಜು ಮಂಗಳವಾರ ಭೇಟಿ ನೀಡಿ ಕಾಡಾನೆಗಳ ದಾಳಿಯಿಂದ ಹಾನಿಯುಂಟಾಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದರು.

ಕಾಡಾನೆಗಳ ಕಾಟದಿಂದ ನಲುಗಿ ಹೋಗಿದ್ದೇವೆ.. ಒಂಟಿ ಸಲಗ ಜನರಲ್ಲಿ ಭಯ ಹುಟ್ಟಿಸಿದ್ದು, ಅದನ್ನು ಸೆರೆ ಹಿಡಿಯಿರಿ.. ಸೋಲಾರ್ ಬೇಲಿ ಕೆಲಸ ಮಾಡುತ್ತಿಲ್ಲ.. ರೈಲ್ವೆ ಹಳಿ ತಡೆಗೋಡೆಯನ್ನು ನಿರ್ಮಿಸಿ. ರಾತ್ರಿ ವೇಳೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಿ.. ರಾತ್ರಿ ಕಾವಲು ಹೆಚ್ಚಿಸುವ ಮೂಲಕ ಕಾಡಾನೆಗಳ ಕಾಟ ತಪ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದರು.

ಆನೆ ದಾಳಿಯಿಂದ ಸಾಕುಪ್ರಾಣಿಗಳು ಮೃತಪಟ್ಟಿವೆ. ಹಲವು ವಾಹನಗಳು ಜಖಂಗೊಂಡಿದ್ದು, ಬೆಳೆಗಳು ನಾಶವಾಗಿದೆ. ಇದರಿಂದ ನಾವುಗಳು ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ ಎಂದು ಕಿಕ್ಕೇರಿಕಟ್ಟೆ ಗ್ರಾಮದ ರೈತರಾದ ಪುಟ್ಟರಾಜು, ಕಾರ್ಯಪ್ಪ, ಓ.ಕೆ.ಚಂದ್ರಶೇಖರ್ ಅಳಲು ತೋಡಿಕೊಂಡರು.

ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲ
ವನ್ಯಜೀವಿ ಹಾವಳಿ ಇರುವ ಹಳ್ಳಿಗಳಲ್ಲಿ ರಾತ್ರಿ 11ರ ನಂತರ ಕರೆಂಟ್ ಕಟ್ ಮಾಡಲಾಗುತ್ತದೆ. ಪರಿಣಾಮ ಕಗ್ಗತ್ತಲಲ್ಲೇ ಬದುಕು ಸಾಗಿಸಬೇಕಿದೆ. ಜತೆಗೆ ಮನೆಯಿಂದ ಹೊರ ಬರುವುದು ದುಸ್ತರ. ಜಾನುವಾರುಗಳ ಪ್ರಾಣಕ್ಕೂ ಅಪಾಯವಿದ್ದು, ಒಮ್ಮೆಮ್ಮೆ ರಾತ್ರಿ ಹೋಗುವ ಕರೆಂಟ್ ದಿನಗಟ್ಟಲೇ ಬರುವುದಿಲ್ಲ. ಇದನ್ನು ಹೇಳುವವರು-ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸ್ಥಳೀಯರಾದ ಓ.ಕೆ.ಮೋಹನ್, ತಿಲಕ್‌ಕುಮಾರ್, ರಂಗಣ್ಣ ಕಿಡಿಕಾರಿದರು.

ತಹಸೀಲ್ದಾರ್ ಸೂಚನೆ:
ಈ ಭಾಗದ ರೈತರು ಕಾಡಾನೆಗಳ ಕಾಟದಿಂದ ನಲುಗಿದ್ದಾರೆ. ಜೀವ ಭಯದಿಂದ ಬದುಕುತ್ತಿದ್ದು, ಅರಣ್ಯ ಇಲಾಖೆಯು ಕಾಡಾನೆಗಳು ಹೊರ ಬಾರದಂತೆ ಕ್ರಮ ವಹಿಸಬೇಕೆಂದು ತಹಸೀಲ್ದಾರ್ ಬಸವರಾಜು ಆರ್‌ಎಫ್‌ಒ ಹನುಮಂತರಾಜುಗೆ ಸೂಚಿಸಿದರು.

ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಕರೆಂಟ್ ಕಟ್ ಮಾಡದಂತೆ ಸೆಸ್ಕ್ ಇಇ ಸುನೀಲ್ ಹಾಗೂ ಎಇಇ ಸಿದ್ದಪ್ಪಗೆ ಸೂಚನೆ ನೀಡಿದರು. ರಾತ್ರಿ ವೇಳೆ ಕರೆಂಟ್ ನೀಡಿದಲ್ಲಿ ಪಂಪ್‌ಸೆಟ್‌ಗೆ ಬಳಕೆ ಮಾಡಲ್ಲವೆಂದು ಲಿಖಿತ ರೂಪದಲ್ಲಿ ಹೇಳಿಕೆ ನೀಡಬೇಕೆಂದು ಇಇ ಸುನಿಲ್ ತಿಳಿಸಿದಾಗ, ಗ್ರಾಮಸ್ಥರು ಒಪ್ಪಿಗೆ ನೀಡಿದರು.

ಒಂಟಿ ಸಲಗದ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರೂ ಅದು ನಾಡು ಪ್ರವೇಶಿಸುತ್ತಿದೆ. ಜತೆಗೆ ಸೋಲಾರ್ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಇದೀಗ ಹೆಚ್ಚುವರಿ ಸಿಬ್ಬಂದಿ ಹಾಗೂ ಸಾಕಾನೆಗಳ ಸಹಾಯದಿಂದ ಕಿಕ್ಕೇರಿಕಟ್ಟೆ, ಬೆಕ್ಕೆಶೆಡ್, ಕಲ್‌ಕಂಡಿ, ಕಾಳಬೂಚನಹಳ್ಳಿ, ಉಡುವೆಪುರ, ಉತ್ತೇನಹಳ್ಳಿ ಸೇರಿದಂತೆ ಹಲವೆಡೆ ರಾತ್ರಿಯಿಡೀ ಕಾವಲನ್ನು ಹೆಚ್ಚಿಸಲಾಗಿದೆ. ಒಂಟಿ ಸಲಗವನ್ನು ಸೆರೆ ಹಿಡಿಯಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದೆಂದು ವಲಯ ಅರಣ್ಯಾಧಿಕಾರಿ ಹನುಮಂತರಾಜು ಗ್ರಾಮಸ್ಥರಿಗೆ ಅಭಯ ನೀಡಿದರು.

ರೈಲ್ವೆ ಕಂಬಿ ಬೇಲಿ ನಿರ್ಮಾಣವಾಗಲಿ: ವೀರನಹೊಸಹಳ್ಳಿಯಿಂದ ಚಂದನಗಿರಿ ಹಾಡಿವರೆಗೆ ರೈಲ್ವೆ ಕಂಬಿ ಬೇಲಿ ನಿರ್ಮಿಸಿರುವಂತೆ ಇಲ್ಲಿಯೂ ಅದೇ ರೀತಿ ಕ್ರಮ ವಹಿಸಿದರೆ ಕಾಡಾನೆ ಹಾವಳಿ ತಪ್ಪಲಿದೆ ಎಂದು ರೈತರು ಸಲಹೆ ನೀಡಿದರು.

ಇದಕ್ಕೆ ದನಿಗೂಡಿಸಿದ ಆರ್‌ಎಫ್‌ಒ ಹನುಮಂತರಾಜು, ಈ ಭಾಗ ಬಫರ್‌ಝೋನ್ ವ್ಯಾಪ್ತಿಯಲ್ಲಿದ್ದು, ವನ್ಯಜೀವಿ ವಿಭಾಗಕ್ಕೆ ಸೇರಿಕೊಂಡಿದೆ. ಅಲ್ಲದೆ ತಡೆಗೋಡೆ ಯೋಜನೆಗೆ ಸೇರಿಲ್ಲ ಎಂದಾಗ, ಶಾಸಕರ ಮೂಲಕ ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗುವುದೆಂದು ತಹಸೀಲ್ದಾರ್ ಸೂಚಿಸಿದರು.

ಶಾಸಕರು ಸ್ಥಳಕ್ಕೆ ಭೇಟಿ ನೀಡಿಲ್ಲ;
ಇಷ್ಟೆಲ್ಲ ಅನಾಹುತವಾಗಿ ರೈತರು ಸಂಕಷ್ಟದಲ್ಲಿದ್ದರೂ ಶಾಸಕ ಮಂಜುನಾಥ್ ಈವರೆಗೂ ಸ್ಥಳಕ್ಕೆ ಭೇಟಿ ನೀಡದಿರುವುದು ಬೇಸರ ತಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಶಾಸಕರು ಭೇಟಿ ನೀಡಿ, ರೈಲ್ವೆ ತಡೆಗೋಡೆ ನಿರ್ಮಿಸಲು ಕ್ರಮವಹಿಸಲಿ ಎಂದು ಮನವಿ ಮಾಡಿದರು.
ಡಿಆರ್‌ಎಫ್‌ಒಗಳಾದ ವೀರಭದ್ರ, ಸಿದ್ದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net