

ಬೆಂಗಳೂರು: ಕಾವೇರಿ ನದಿಗೆ ಕನಕಪುರ ತಾಲೂಕು ಮೇಕೆದಾಟುನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಡ್ಯಾಂ ನಿರ್ಮಿಸಬೇಕೆಂಬ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ತಮಿಳುನಾಡು ಬಹಿರಂಗವಾಗಿಯೇ ಆಕ್ಷೇಪಹೊರಹಾಕಿತ್ತು. ಆದರೆ, ತಮಿಳುನಾಡು ಹಾಗೂ ಕರ್ನಾಟಕದ ರೈತರು ಕೂಡಿಕೊಂಡು ಸರ್ಕಾರದ ಮುಂದಿಡಡಲು ಹೊಸ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದಾರೆ.
ಕನಕಪುರ ತಾಲೂಕಿನ ಮೇಕೆದಾಟು ಬದಲು ಚಾಮರಾಜನಗರ ಜಿಲ್ಲೆ ಹನೂರಿಗೆ ಹೊಂದಿಕೊಂಡಂತೆ ಇರುವ ರಾಶಿಮನಲ್‌ನಲ್ಲಿ ಎರಡೂ ರಾಜ್ಯದ ಗಡಿಯಲ್ಲಿ ಜಲಾಶಯ ನಿರ್ಮಿಸಿದರೆ ಅನುಕೂಲ ಹೆಚ್ಚು ಎಂದು ತಮಿಳುನಾಡು ರೈತರು ಪ್ರಸ್ತಾಪಿಸಿದ್ದು, ಕರ್ನಾಟಕದ ರೈತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆಯಲು ಬಯಸಿದ್ದಾರೆ.
ಆ ಪ್ರಕಾರ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲೇ ಒಂದು ಸಭೆ ಆಯೋಜಿಸಲು ಎರಡೂ ರಾಜ್ಯದ ರೈತ ಹೋರಾಟಗಾರರು ಬಯಸಿದ್ದಾರೆ. ರಾಶಿಮನಲ್‌ನಲ್ಲಿ ಜಲಾಶಯ ನಿರ್ಮಿಸುವುದರಿಂದ ಆಗುವ ಸಾಧಕ-ಬಾಧಕ, ಸವಾಲುಗಳ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ತಜ್ಞರ ಸಮಿತಿ ರಚಿಸುವುದಕ್ಕೂ ಬಯಸಿದ್ದಾರೆ.
ವಿಜಯವಾಣಿಯೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕುರುಬೂರು ಶಾಂತಕುಮಾರ್, ಇತ್ತೀಚೆಗೆ ತಮಿಳುನಾಡಿಗೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಆಕ್ಷೇಪ ಏಕೆ, ನಮಗೆ ಬೇಸಿಗೆಯಲ್ಲೇ ಕುಡಿಯುವ ನೀರಿಲ್ಲದೇ ಸಮಸ್ಯೆಯಾಯಿತು ಎಂದು ತಮಿಳುನಾಡಿನ ರೈತ ಹೋರಾಟಗಾರರ ಗಮನ ಸೆಳೆದವು. ಆ ಸಂದರ್ಭದಲ್ಲಿ ರಾಶಿಮನಲ್ ಬಗ್ಗೆ ಅವರು ಪ್ರಸ್ತಾಪಿಸಿದರು. ಮುಂದುವರಿದ ಪ್ರಯತ್ನವಾಗಿ ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದೆವು ಎಂದರು.
ರಾಶಿಮನಲ್ ಹಾಗೂ ಮೇಕೆದಾಟು ಯೋಜನೆ ಬಗ್ಗೆ ತುಲನೆ ಮಾಡಬೇಕಾಗುತ್ತದೆ, ಯಾವುದು ಹೆಚ್ಚು ಅನುಕೂಲ ಎಂದು ನೋಡೋಣ. ನೀರಾವರಿ, ಅರಣ್ಯ, ಪರಿಸರ ಕ್ಷೇತ್ರದ ತಜ್ಞರ ತಂಡ ರಚಿಸಿ ಅಭಿಪ್ರಾಯ ಸಂಗ್ರಹಿಸೋಣ. ಬಳಿಕ ಮುಂದುವರಿಯೋಣ ಎಂದು ಹೇಳಿದ್ದೇವೆ. ಅಕ್ಟೋಬರ್‌ನಲ್ಲಿ ಸಭೆ ಕರೆಯುವ ಉದ್ದೇಶವಿದೆ. ಅಲ್ಲಿ ಈ ಬಗ್ಗೆ ಚಿತ್ರಣ ಇನ್ನೊಂದಿಷ್ಟು ಸ್ಪಷ್ಟವಾಗಲಿದೆ ಎಂದು ವಿವರಿಸಿದರು.
ಎರಡೂ ರಾಜ್ಯದ ರೈತರು, ತಜ್ಞರು, ಹಾಗೂ ಅನ್ಯ ರಾಜ್ಯ ಅಥವಾ ಕೇಂದ್ರಕ್ಕೆ ಸಂಬಂಧಪಟ್ಟವರನ್ನು ಸಮಿತಿಯಲ್ಲಿ ಇಟ್ಟುಕೊಂಡು ಮುಂದುವರಿದಾಗ ಯಾರಿಗೂ ಹೆಚ್ಚು ಕಡಿಮೆಯಾಗದಂತೆ ಅಭಿಪ್ರಾಯ ಬರಲಿದೆ. ಅಕ್ಟೋಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ವಿವಿಧ ರೈತ ಸಂಘಟನೆಗಳು, ಕಾವೇರಿ ಕುಟುಂಬದವರನ್ನೂ ಆಹ್ವಾನಿಸುತ್ತೇವೆ ಎಂದರು.