ಉದ್ಯಮಿಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಖತರ್ನಾಕ್​ ಲೇಡೀಸ್​ ಗ್ಯಾಂಗ್​ ಸ್ಕೆಚ್​ ಕೇಳಿದ್ರೆ ಬೆರಗಾಗ್ತೀರಾ!

Ladies Gang
Published on

ಬ್ಯೂನಸ್ ಐರಿಸ್: ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗುತ್ತಿದ್ದ ಉದ್ಯಮಿಗಳಿಗೆ ಡ್ರಗ್​ ನೀಡಿ ಸುಲಿಗೆ ಮಾಡುತ್ತಿದ್ದ 17 ವರ್ಷದ ಹುಡುಗಿ ಸೇರಿದಂತೆ ನಾಲ್ವರ ಗ್ಯಾಂಗ್​ ಅನ್ನು ಅರ್ಜೆಂಟೀನಾ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರನ್ನು ಸಬ್ರಿನಾ ಸಿಂಥಿಯಾ ನೊವಿಲ್ಲೊ (36) ಮತ್ತು ಪಮೆಲಾ ಸೊಸಾ (17) ಹಾಗೂ 29 ವರ್ಷದ ಪುರುಷ ಎಂದು ಗುರುತಿಸಲಾಗಿದ್ದು, ಜುಲೈ 20ರಂದು ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್​ನ ರಹಸ್ಯ ಪಾರ್ಟಿಯೊಂದರಲ್ಲಿ ಬಂಧಿಸಲಾಗಿತ್ತು. ಮಹಾಮಾರಿ ಕೋವಿಡ್​-19 ಸೋಂಕಿನಿಂದಾಗಿ ಮಾರ್ಚ್​ನಿಂದ ಕೆಲ ನಿಯಮಗಳು ಜಾರಿಯಲ್ಲಿದ್ದರೂ ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಪಾರ್ಟಿಯಲ್ಲಿ ತೊಡಗಿದ್ದರು.

ಇದೇ ಪ್ರಕರಣದಲ್ಲಿ ನೊವಿಲ್ಲೊ ಸಹೋದರಿ ಮಕರಿನಾ ನೊವಿಲ್ಲೊ ಮತ್ತು ಆಕೆಯ ನಾದಿನಿ ಕರೇನ್​ ನೈವಾರನ್ನು ಕೂಡ ಬಂಧಿಸಲಾಗಿದೆ. 2018 ರಿಂದ 2020 ನಡುವೆ ನೊವಿಲ್ಲೊ ನೇತೃತ್ವದ ಗ್ಯಾಂಗ್​ ಸುಮಾರು ಐದು ಸುಲಿಗೆಗಳಲ್ಲಿ ಭಾಗಿಯಾಗಿದೆ. ಬ್ಯೂನಸ್ ಐರಿಸ್​ನ 52 ವರ್ಷದ ರೆಸ್ಟೊರೆಂಟ್​ ಮಾಲೀಕರ ಬಳಿ ನಡೆದ ಸುಲಿಗೆ ಪ್ರಕರಣದ ತನಿಖೆಯಲ್ಲಿ ಗ್ಯಾಂಗ್​ ಸಿಕ್ಕಿಬಿದ್ದಿದ್ದಾರೆ.

ವಾಟ್ಸ್​ಆ್ಯಪ್​ ಮೂಲಕ ಪರಿಚಯವಾದ ನೊವಿಲ್ಲೊ ಹಾಗೂ ಸೊಸಾರನ್ನು ಮೇ 25ರಂದು ರೆಸ್ಟೋರೆಂಟ್​ ಮಾಲೀಕ ತನ್ನ ಅಪಾರ್ಟ್​ಮೆಂಟ್​ಗೆ ಆಹ್ವಾನಿಸಿದ್ದ. ಅವರನ್ನು ಕರೆತರಲು ತನ್ನ ಕಾರು ಚಾಲಕನನ್ನು ಕಳಿಸಿದ್ದ. ಬಳಿಕ ಅಪಾರ್ಟ್​ಮೆಂಟ್​ಗೆ ಆಗಮಿಸಿದ ಇಬ್ಬರ ಜತೆಗೂಡಿ ಸಣ್ಣ ಪಾರ್ಟಿ ಆಯೋಜನೆ ಮಾಡಿದ್ದ. ಈ ವೇಳೆ ಕಂಠಪೂರ್ತಿ ಕುಡಿದಿದ್ದ ಮಾಲೀಕನಿಗೆ ಓರ್ವ ಮಹಿಳೆ ಡ್ರಗ್​ ನೀಡಿ ನಿದ್ರೆಗೆ ಜಾರುವಂತೆ ಮಾಡಿದ್ದಾಳೆ. ಗಡತ್ತಾದ ನಿದ್ರೆಗೆ ಜಾರಿದ್ದ ಮಾಲೀಕ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ರೊಲೆಕ್ಸ್​ ಮತ್ತು ಹ್ಯುಬ್ಲೊಟ್​ ವಾಚ್​ ಹಾಗೂ ಐಫೋನ್​ ಸೇರಿದಂತೆ 70 ಸಾವಿರ ಡಾಲರ್​ (5,250,823 ರೂ.) ಸುಲಿಗೆ ಮಾಡಿದ್ದಾರೆ. ಅಲ್ಲದೆ, ಆತನ ಟೊಯೊಟಾ ಕೊರೊಲಾ ಕಾರಿನ ಕೀ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಉದ್ಯಮಿಗಳಿಗೆ ಡ್ರಗ್ಸ್​ ನೀಡಿ ಸಾಕಷ್ಟು ಹಣವನ್ನು ಗ್ಯಾಂಗ್​ ದೋಚಿದೆ.

ಅರ್ಜೆಂಟೀನಾದ ಸಾಸರ್​ ಪ್ಲೇಯರ್​ ವಾಲ್ಟರ್​ ಬುಸ್ಸೆ ಅವರನ್ನು 2011ರ ಏಪ್ರಿಲ್​ 26ರಂದು ಭೇಟಿ ಅವರಿಂದ ಸುಲಿಗೆ ಮಾಡಿದ ಬಳಿಕ ಖತರ್ನಾಕ್​ ಲೇಡಿ ನೊವಿಲ್ಲೋ ಹೆಚ್ಚು ಸುದ್ದಿಯಾದಳು. ನೊವಿಲ್ಲೊ ಜತೆಗೆ ಮತ್ತೋರ್ವ ಮಹಿಳೆಯನ್ನು ತನ್ನ ಮನೆಗೆ ಬುಸ್ಸೆ ಕರೆದೊಯ್ದಿದ್ದ. ಮಾರನೇ ದಿನವೇ ಮನೆಯಿಂದ ಬುಸ್ಸೆ ಅವರ ಪ್ರೀತಿಯ ನಾಯಿ, ಲ್ಯಾಪ್​ಟಾಪ್​, ಐಪ್ಯಾಡ್​, ಎರಡು ಬ್ಲ್ಯಾಕ್​ಬೆರ್ರಿ ಫೋನ್​​, ಕ್ಯಾಮೆರಾ, ಟಿವಿ ಮತ್ತು ಮಿನಿ ಕೂಪರ್​ ಕಾಣೆಯಾಗಿತ್ತು.

ಕೊನೆಗೂ ಅರ್ಜೆಂಟಿನಾ ಅಧಿಕಾರಿಗಳ ಕೈಗೆ ಖತರ್ನಾಕ್​ ಗ್ಯಾಂಗ್​ ಸಿಕ್ಕಿಬಿದ್ದಿದ್ದು, ಜೈಲು ಶಿಕ್ಷೆಗೆ ಗುರಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net