

ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದರು. ಹಾಗೇ ಮಾತು ಪ್ರಾರಂಭಿಸುವ ಮೊದಲು ಅವರು, ಜೈ ಶ್ರೀರಾಮ್ ಎಂದು ಹೇಳುವ ಬದಲು, ಜೈ ಸಿಯಾ ರಾಮ್ ಎಂದು ಘೋಷಣೆ ಕೂಗಿದರು.
ಮಂದಿರ ಹೋರಾಟ ಕಾಲದಿಂದಲೂ ನಡೆದು ಬಂದ ಪ್ರಸಿದ್ಧ ಘೋಷವಾಕ್ಯ ಜೈ ಶ್ರೀರಾಮ್ ಬದಲು ಜೈ ಸಿಯಾ ರಾಮ್ ಎಂದೇ ಯಾಕೆ ಪ್ರಧಾನಿ ಹೇಳಿದರು ಎಂಬುದು ಅನೇಕರ ಕುತೂಹಲ. ಮೊದಲಿಗೆ ನಾವು ಪ್ರಭು ರಾಮಚಂದ್ರ ಹಾಗೂ ಮಾತೆ ಜಾನಕಿಯನ್ನು ನೆನಪು ಮಾಡಿಕೊಳ್ಳೋಣ ಎಂದು ಹೇಳಿದ ಮೋದಿಯವರು...ಸಿಯಾವರ್ ರಾಮಚಂದ್ರ ಕೀ ಜೈ...ಜೈ ಸಿಯಾ ರಾಮ್ ಎಂದು ಜೈ ಕಾರ ಹಾಕಿದರು.
1984ರಲ್ಲಿ ರಾಮಮಂದಿರ ಆಂದೋಲನ ಶುರುವಾಗಿದೆ. ಅಂದಿನಿಂದಲೂ ಕೇಸರಿಪಡೆಯಲ್ಲಿ ಜೈ ಶ್ರೀರಾಮ್ ಎಂಬುದು ಪ್ರಸಿದ್ಧ ಶುಭಾಶಯ ವಿಧಾನ. ಅಷ್ಟೇ ಅಲ್ಲ, ರಾಮಮಂದಿರ ಹೋರಾಟ ಗಂಭೀರಸ್ವರೂಪಕ್ಕೆ ತಿರುಗಿದಾಗ ಈ ಜೈ ಶ್ರೀರಾಮ್ ಎಂಬುದು ಯುದ್ಧ ಘೋಷ ವಾಕ್ಯವಾಯಿತು. ಇದನ್ನೂ ಓದಿ: ರಾಮ ಜನ್ಮಭೂಮಿ ಆವರಣದಲ್ಲಿ ಪ್ರಧಾನಿ ಮೋದಿ ಪಾರಿಜಾತ ನೆಟ್ಟಿದ್ದು ಏಕೆ?
ಹಾಗೇ ಒಂದಷ್ಟು ಜನರು ಜೈ ಸಿಯಾ ರಾಮ್ ಎಂಬುದನ್ನು ಶುಭಾಶಯ ವಿಧಾನವನ್ನಾಗಿ ಮಾಡಿಕೊಂಡಿದ್ದರು. ಜೈ ಸಿಯಾ ರಾಮ್ ಎಂದರೆ ಶ್ರೀರಾಮ ಸೀತೆಯ ಸಹಿತ ಇರುವ ಸೌಮ್ಯ ರೂಪ, ಮರ್ಯಾದಾ ಪುರಷೋತ್ತನ ಸ್ವಭಾವ ಅದು. ಹಾಗೇ, ಮೃದುತ್ವ ಮತ್ತು ನಮ್ರತೆಯ ಪ್ರತೀಕ ಎಂದು ಶ್ರೀರಾಮನ ಭಕ್ತರು ನಂಬಿದ್ದರು. ಅಂದರೆ ಜೈ ಶ್ರೀರಾಮ್ ಎಂಬುದು ಹೋರಾಟದ ಪ್ರತಿರೂಪವಾಗಿಯೂ..ಜೈ ಸಿಯಾ ರಾಮ್ ಎಂಬುದು ಸೌಮ್ಯ ಮೂರ್ತಿಯ ಸಂಕೇತವಾಗಿಯೂ ಉಲ್ಲೇಖಿಸಲ್ಪಟ್ಟಿತು.
ಈ ಬಗ್ಗೆ ತೇವಾರಿ ಮಂದಿರದ ಮಹಾಂತ್ ಗಿರಿಶ್ಪತಿ ತ್ರಿಪಾಠಿ ವಿವರಿಸಿದ್ದಾರೆ. ಜೈ ಶ್ರೀರಾಮ್ ಎಂಬುದು ನಿರ್ಭಯ ಭಾವವನ್ನು ಒಳಗೊಂಡಿದೆ. ಅದನ್ನು ಉಚ್ಛರಿಸಿದರೆ ನಮ್ಮಲ್ಲೂ ಧೈರ್ಯ ಮೂಡುತ್ತದೆ. ಹಾಗೇ ಜೈ ಸಿಯಾ ರಾಮ್ ಎಂಬುದು ಇತರರ ಒಳಿತನ್ನೂ ಒಳಗೊಂಡಿದೆ. ಹಾಗೇ, ಜೈ ಶ್ರೀರಾಮ್ ಯುದ್ಧೋನ್ಮಾದವಾಗಿದ್ದರೆ, ಜೈ ಸಿಯಾ ರಾಮ್ ಪ್ರೀತಿ, ಅರ್ಪಣೆಯ ಭಾವವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಮಗನನ್ನು ಟೀಮ್ ಕಂಗನಾ ಟಾರ್ಗೆಟ್ ಮಾಡುತ್ತಿರುವುದೇಕೆ?
ಜೈ ಶ್ರೀರಾಮ್ ಮತ್ತು ಜೈ ಸಿಯಾ ರಾಮ್ ನಡುವೆ ನಿಜವಾಗಿಯೂ ಯಾವುದೇ ವ್ಯತ್ಯಾಸವಿಲ್ಲ. ಇವೆರಡೂ ರಾಮನನ್ನು ಸ್ಮರಿಸಲು ಹೇಳುವ ವಾಕ್ಯಗಳು ಎಂದು ಹೇಳಲಾಗಿದೆ.
ಹಾಗೇ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೈ ಸಿಯಾ ರಾಮ್ ಎಂದು ಹೇಳಿದ್ದು, ಗುರಿ ಸಾಧನೆ ಮಾಡಿದ್ದರ ಸಂಕೇತ. 1984ಕ್ಕೂ ಮೊದಲು ಜೈ ಶ್ರೀರಾಮ್ ಮತ್ತು ಜೈ ಸಿಯಾ ರಾಮ್ ನಡುವೆ ಯಾವುದೇ ವ್ಯತ್ಯಾಸವೂ ಇರಲಿಲ್ಲ. ಆದರೆ ನಂತರ ಇವೆರಡನ್ನೂ ಬೇರೆಯದ್ದೇ ಅರ್ಥಗಳಲ್ಲಿ ಬಳಸಲಾಯಿತು. ಜೈ ಶ್ರೀರಾಮ್ ಚಳವಳಿ ರೂಪ ಪಡೆದುಕೊಂಡಿತು. ಜೈ ಸಿಯಾ ರಾಮ್ ಪದದ ಸೌಮ್ಯತೆಯನ್ನು ಹಾಗೇ ಉಳಿಸಿಕೊಂಡಿತು. ರಾಮಮಂದಿರ ನಿರ್ಮಾಣದ ಉದ್ದೇಶ ಈಗ ಈಡೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜೈ ಸಿಯಾ ರಾಮ್ ಎಂಬ ಪದವನ್ನೇ ಆಯ್ಕೆ ಮಾಡಿಕೊಂಡಿದ್ದಾರೆಂದು ಅಯೋಧ್ಯಾ ಅವಧ್ ಯೂನಿವರ್ಸಿಟಿಯ ಮಾಜಿ ಉಪಕುಲಪತಿ ಮನೋಜ್ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)