

ನವದೆಹಲಿ: ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಸದಸ್ಯರ ಉತ್ಸಾಹಭರಿತ ಚರ್ಚೆಗಳಿಗೆ ಸಾಕ್ಷಿಯಾಗಿದ್ದ ಎರಡನೇ ಹಂತದ ಬಜೆಟ್ ಅಧಿವೇಶನ ಗುರುವಾರ ಮುಕ್ತಾಯಗೊಂಡಿದೆ. ನಿಗದಿಗಿಂತ ಒಂದು ದಿನಕ್ಕೆ ಮುಂಚಿತವಾಗಿ ಅಧಿವೇಶನ ಕೊನೆಗೊಂಡಿದೆ.
ಜನವರಿ 31ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಮೊದಲ ಹಂತದ ಬಜೆಟ್ ಅಧಿವೇಶನ ಆರಂಭಗೊಂಡಿತ್ತು. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದರು. ಮೊದಲ ಹಂತ ಫೆ.11ರಂದು ಮುಕ್ತಾಯಗೊಂಡು, ಎರಡನೇ ಹಂತ ಮಾರ್ಚ್ 14ರಂದು ಆರಂಭಗೊಂಡಿತ್ತು. ಲೋಕಸಭೆಯಲ್ಲಿ ಹಣಕಾಸು ಬಜೆಟ್ ವಿಧೇಯಕ, ದೆಹಲಿ ಮುನ್ಸಿಪಲ್ ಕಾರ್ಪೆರೇಷನ್ (ತಿದ್ದುಪಡಿ) ಮಸೂದೆ ಮತ್ತು ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ವಿಧೇಯಕ ಸೇರಿ 12 ಪ್ರಮುಖ ವಿಧೇಯಕಗಳಿಗೆ ಲೋಕಸಭೆ ಅನುಮೋದನೆ ನೀಡಿದೆ. ರಾಜ್ಯಸಭೆ ಒಟ್ಟು 11 ವಿವಿಧ ವಿಧೇಯಕಗಳಿಗೆ ತನ್ನ ಸಮ್ಮತಿ ನೀಡಿದೆ.
ಅಧಿವೇಶನವನ್ನು ನಿಗದಿತ ಅವಧಿಗೆ ಮುನ್ನವೇ ಮುಕ್ತಾಯಗೊಳಿಸಿರುವುದರ ಬಗ್ಗೆ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್, ಹಣದುಬ್ಬರದಂತಹ ಜ್ವಲಂತ ವಿಷಯಗಳ ಚರ್ಚೆಯಿಂದ ಕೇಂದ್ರ ಸರ್ಕಾರ ಓಡಿಹೋಗುತ್ತಿದೆ ಎಂದು ಆರೋಪಿಸಿದೆ. ಲೋಕಸಭೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ಮತ್ತು ರಾಜ್ಯಸಭೆಯ ಬಿಎಸಿ ಸಭೆಯಲ್ಲಿ ಪ್ರಮುಖ ವಿಧೇಯಕಗಳ ಚರ್ಚೆಗೆ ಸರ್ಕಾರ ಸಮಯ ನಿಗದಿಪಡಿಸಿತ್ತು. ಆದರೆ, ಅದಕ್ಕೆ ಅವಕಾಶ ನೀಡದೆ ಸರ್ಕಾರ ವಿಶ್ವಾಸಘಾತಕ ಕೃತ್ಯ ಎಸಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಅಧಿರ್ ರಂಜನ್ ಚೌಧುರಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಸಭೆಯಲ್ಲಿ ಸರ್ಕಾರದ ಸಭಾ ನಾಯಕ ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್, ಹಿಂದೆ ಅರುಣ್ ಜೇಟ್ಲಿ ಮತ್ತು ಥಾವರ್ ಚಂದ್ ಗೆಹ್ಲೋಟ್ ಸದಾ ಹಾಜರಿರುತ್ತಿದ್ದರು ಮತ್ತು ಸಭಾನಾಯಕನ ಜವಾಬ್ದಾರಿ ಕೂಡ ಹೌದು. ಆದರೆ ಗೋಯೆಲ್ ಅವರು ಇದನ್ನು ಮರೆತಂತಿದೆ ಎಂದು ಟೀಕಿಸಿದ್ದಾರೆ.
17ನೇ ಲೋಕಸಭೆಯ ಎಂಟನೇ ಅಧಿವೇಶನದ ಒಟ್ಟು ಉತ್ಪಾದಕತೆ ಶೇಕಡ 129. ಒಟ್ಟು 27 ಕಲಾಪಗಳಿಗೆ ಅಧಿವೇಶನ ಸಾಕ್ಷಿಯಾಯಿತು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ವಿಪಕ್ಷಗಳ ಗದ್ದಲ, ಅಡೆತಡೆಗಳಿಂದಾಗಿ ರಾಜ್ಯಸಭೆಯ 9.30 ನಿಮಿಷ ವ್ಯರ್ಥವಾಗಿತ್ತು. ಆದರೆ ಹೆಚ್ಚುವರಿಯಾಗಿ 9 ಗಂಟೆ 16 ನಿಮಿಷ ಕಲಾಪ ನಡೆಸಿದೆವು. ಸದನ ಇನ್ನೂ 10 ನಿಮಿಷ ಹೆಚ್ಚು ನಡೆದಿದ್ದರೆ ಉತ್ಪಾದಕತೆ ಶೇ.100 ಆಗುತ್ತಿತ್ತು ಎಂದು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಬಜೆಟ್ ಅಧಿವೇಶನದ 94 ಪ್ರತಿಶತಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯಸಭೆಯ ಉತ್ಪಾದಕತೆ ಸುಧಾರಣೆ ಕಂಡಿದೆ. ರಾಜ್ಯಸಭೆಯ ಕೆಲ ಸದಸ್ಯರು ಸದನದ ಬಾವಿಯತ್ತ ತೆರಳಿ ಘೊಷಣೆ ಕೂಗುತ್ತಿದ್ದುದರಿಂದ ಸಭಾಪತಿ ವೆಂಕಯ್ಯ ನಾಯ್ಡು ಅವರು ಸಮಾರೋಪ ಭಾಷಣ ಮಾಡಲಿಲ್ಲ. ಈ ಬಾರಿ ಲೋಕಸಭೆಯಲ್ಲಿ ಹವಾಮಾನ ಬದಲಾವಣೆ, ಯುದ್ಧಪೀಡಿತ ಉಕ್ರೇನ್ ಪರಿಸ್ಥಿತಿ ಮತ್ತು ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಅಗತ್ಯತೆಯ ಕುರಿತಂತೆ ಅಲ್ಪಾವಧಿಯ ಚರ್ಚೆಗಳೂ ಗಮನಸೆಳೆದವು.