ಅನ್ನ, ಆರೋಗ್ಯ, ಅಭಿವೃದ್ಧಿಯ ಮಂತ್ರ; ಆತ್ಮನಿರ್ಭರ ಭಾರತಕ್ಕೆ ಬಜೆಟ್ ಮಾರ್ಗಸೂಚಿ

Front Feature
Published on

| ಕೃಷಿ, ಆರೋಗ್ಯ ಕ್ಷೇತ್ರಕ್ಕೆ ಖುಷಿ | ಮೂಲಸೌಕರ್ಯಕ್ಕೆ ಒತ್ತು | ಬಂಡವಾಳಕ್ಕಾಗಿ ಖಾಸಗಿ ಹೂಡಿಕೆಗೆ ಕೆಂಪುಹಾಸು | ತೆರಿಗೆ ಸ್ಲ್ಯಾಬ್ ಯಥಾಸ್ಥಿತಿ | ಕೃಷಿ ಸೆಸ್ ಪ್ರಸ್ತಾಪ

ಮಹಾಮಾರಿ ಕರೊನಾದಿಂದಾಗಿ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಜತೆಗೆ ಕೃಷಿ, ಆರೋಗ್ಯ, ಮೂಲಸೌಕರ್ಯ ಕ್ಷೇತ್ರಗಳ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣ ಕನಸನ್ನು ನನಸು ಮಾಡುವತ್ತ ಕೇಂದ್ರ ಸರ್ಕಾರ ಕಸರತ್ತು ನಡೆಸಿದೆ. ಸೋಮವಾರ ಮಂಡನೆಯಾದ ಬಜೆಟ್​ನಲ್ಲಿ ಈ ಮೂರು ಕ್ಷೇತ್ರಗಳಿಗೆ ಬಂಪರ್ ಘೋಷಣೆ ಹೊರಡಿಸುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರದ ಆದ್ಯತೆ, ಆಶಯಗಳನ್ನು ತೆರೆದಿಟ್ಟಿದ್ದಾರೆ. ಕೇಂದ್ರದ ಕೃಷಿ ಕಾನೂನಿನ ವಿರುದ್ಧ ದೇಶದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಅನ್ನದಾತರಿಗೆ ಆದ್ಯತೆ ನೀಡುವ ಹಲವು ಘೋಷಣೆಗಳು ಹೊರಬಿದ್ದಿವೆ. ಕರೊನಾದಿಂದ ಜಝುರಿತವಾಗಿರುವ ಆರೋಗ್ಯಕ್ಷೇತ್ರಕ್ಕೆ ಸುಧಾರಣೆಯ ಲಸಿಕೆ ಪ್ರಯೋಗಿಸಲಾಗಿದೆ. ಕೈಗಾರಿಕೆಗಳಿಗೆ ಉತ್ತೇಜನ, ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಉದ್ಯೋಗ, ಬಂಡವಾಳ ಸೃಷ್ಟಿಗೆ ವೇದಿಕೆ ಕಲ್ಪಿಸಲಾಗಿದೆ. ವಿಶ್ವಾದ್ಯಂತ ಕರೊನಾ ಬಾಧಿಸಿರುವುದರಿಂದ ಬಂಡವಾಳದ ಸವಾಲು ಎದುರಾಗಿದೆ. ಇದಕ್ಕಾಗಿ ಖಾಸಗೀಕರಣದ ಮಂತ್ರ ಜಪಿಸಲಾಗಿದೆ. ಹಾಗೂ ಕೆಲ ವಸ್ತುಗಳ ಸುಂಕ ಏರಿಸಲಾಗಿದೆ. ಜನಸಾಮಾನ್ಯರಿಗೆ ಭಾರೀ ಕೊಡುಗೆ ಸಿಕ್ಕಿಲ್ಲವಾದರೂ ಕೃಷಿ ಸೆಸ್​ನ ಬಿಸಿ ತಟ್ಟಿದೆ. ಸದ್ಯಕ್ಕಲ್ಲವಾದರೂ ಒಟ್ಟಾರೆ ಅಭಿವೃದ್ಧಿಗೆ ಈ ಬಜೆಟ್ ದೂರಗಾಮಿ ವೇದಿಕೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಆರ್ಥಿಕ ಪ್ರಗತಿಗೆ 6 ಆಧಾರಸ್ತಂಭ

  • 34.84 ಲಕ್ಷ ಕೋಟಿ ರೂ.ಬಜೆಟ್ ಗಾತ್ರ
  • 15 ಸಾವಿರ ಶಾಲೆಗಳ ಬಲವರ್ಧನೆ, 100 ಹೊಸ ಸೈನಿಕ ಶಾಲೆ
  • 80 ಸಾವಿರ ಕೋಟಿ ರೂ. ಮಾರುಕಟ್ಟೆಗಳಿಂದ ಆದಾಯ ಸಂಗ್ರಹ ನಿರೀಕ್ಷೆ

ಜನಸಾಮಾನ್ಯರಿಗೆ ಸಿಕ್ಕಿದ್ದೇನು?

  • ಹಳ್ಳಿಗಳ ಬಡ ಕುಟುಂಬಕ್ಕೆ ಉಜ್ವಲಾ ಯೋಜನೆ ಅಡಿ ನೀಡುವ ಅಡುಗೆ ಅನಿಲ 9 ಕೋಟಿ ಕುಟುಂಬಗಳಿಗೆ ವಿಸ್ತರಣೆ, ಮುಂದಿನ 3 ವರ್ಷದಲ್ಲಿ 100 ಜಿಲ್ಲೆಗಳ ಸೇರ್ಪಡೆ
  • ವೇತನ ವರ್ಗಕ್ಕೆ ತೆರಿಗೆ ಭಾರವಿಲ್ಲ, ವಿನಾಯಿತಿಯೂ ಇಲ್ಲ
  • ವಿದ್ಯುತ್ ಪೂರೈಕೆದಾರರ ಆಯ್ಕೆ ಅವಕಾಶ ಗ್ರಾಹಕರಿಗೆ
  • ಜನರಿಗೆ ಕೈಗೆಟಕುವ ದರದಲ್ಲಿ ವಸತಿ ನೀಡುವ ಯೋಜನೆ ಕೂಡ ವಿಸ್ತರಣೆ, ಗೃಹ ಸಾಲದ ಮೇಲಿನ ಸಬ್ಸಿಡಿ, ತೆರಿಗೆ ವಿನಾಯಿತಿ ವಿಸ್ತರಣೆ
  • ಅಧಿಕೃತ ಬಾಡಿಗೆ ಮನೆಗಳಿಗೆ, ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವವರಿಗೆ ತೆರಿಗೆ ವಿನಾಯಿತಿ ನೀಡುವ ತೀರ್ಮಾನ ಘೋಷಣೆ

ಸೆಸ್ ವಿಧಿಸಿದ್ರೂ ತೈಲ ಬೆಲೆ ಏರಲ್ಲ: ಡೀಸೆಲ್ ಮೇಲೆ 4 ರೂ. ಮತ್ತು ಪೆಟ್ರೋಲ್ ಮೇಲೆ 2.5 ರೂ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹೇರುವ ಮುನ್ನವೇ ಮೂಲ ಅಬಕಾರಿ ಸುಂಕ ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸಂಕದ ದರವನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಜನತೆಗೆ ಹೊರೆಯಾಗಲ್ಲ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

ಕೃಷಿರಂಗಕ್ಕೆ ಬಂಪರ್

  • ದೇಶಾದ್ಯಂತ ಕೃಷಿಕರಿಗೆ ಸಾಲ ಸೌಲಭ್ಯ ನೀಡಿ ನೆರವಾಗುವುದಕ್ಕಾಗಿ 16.5 ಲಕ್ಷ ಕೋಟಿ ರೂ. ಮೀಸಲು
  • ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂ.
  • ಬೇಳೆಕಾಳು ಖರೀದಿಗೆ 10,530 ಕೋಟಿ ರೂ., ಗೋಧಿ ಖರೀದಿಗೆ -ಠಿ;33000 ಕೋಟಿ, ಕೃಷಿ ಬೆಳೆಗಳಿವೆ ವಿಮೆ ವಿಸ್ತರಣೆ
  • ಪ್ರಸಕ್ತ ವರ್ಷ ಧಾನ್ಯ ಖರೀದಿ ಹಣ -ಠಿ;1,72,081 ಕೋಟಿಗೆ ಹೆಚ್ಚಳ, ದೇಶದ 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೂ ಆದ್ಯತೆ
  • ಮೀನುಗಾರಿಕೆ, ಪಶುಸಂಗೋಪನೆಗೆ 40 ಸಾವಿರ ಕೋಟಿ ರೂ.
  • ಕೃಷಿ ನೀರಾವರಿಗೆ 5 ಸಾವಿರ ಕೋಟಿ ರೂ.ಹೆಚ್ಚುವರಿ ನೆರವು
ರೈಲ್ವೆಗೆ ಬಂಪರ್:  ರೈಲ್ವೆ ಇಲಾಖೆಯ ಭವಿಷ್ಯದ ಯೋಜನೆಗಳಿಗೆ 1.1 ಲಕ್ಷ ಕೋಟಿ ರೂ. ಸಿಕ್ಕಿದೆ. 2023ರ ಡಿಸೆಂಬರ್ ಒಳಗೆ ವಿದ್ಯುದೀಕರಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ

ಕರ್ನಾಟಕಕ್ಕೆ ಸಿಕ್ಕಿದ್ದು?: ಬೆಂಗಳೂರಿಗೆ ಮತ್ತೆರಡು ಮೆಟ್ರೋ ಮಾರ್ಗ ಸಿಕ್ಕಿದೆ. 2ಎ ಮತ್ತು 2ಬಿ 14,778 ಕೋಟಿ ರೂ. ನೀಡಲಾಗಿದೆ. ಒಟ್ಟು 58.19 ಕಿ.ಮೀ ಉದ್ದದ ಯೋಜನೆ ಇದಾಗಿದೆ.

ಖಾಸಗಿಗೆ ರಹದಾರಿ: ಕೃಷಿ , ಮೂಲಸೌಕರ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿರುವ ಕೇಂದ್ರ ಬಂಡವಾಳಕ್ಕಾಗಿ ಖಾಸಗಿ ಸಹಭಾಗಿತ್ವಕ್ಕೆ ಮಣೆಹಾಕಿದೆ. ಮುಂದಿನ 5 ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಎಲ್​ಐಸಿ ಷೇರು, ಏರ್​ಪೋರ್ಟ್, ವೇರ್ ಹೌಸ್, ರಸ್ತೆ ನಿರ್ವಣ, ವಿದ್ಯುತ್ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ವೇದಿಕೆ ನಿರ್ವಣವಾಗಿದೆ.

ಅನುದಾನ ಮೊತ್ತ

  • ಆರೋಗ್ಯ ಕ್ಷೇತ್ರ: 2,34,846 ಲಕ್ಷ ಕೋಟಿ ರೂ.
  • ರಕ್ಷಣಾ ಇಲಾಖೆ: 4.78 ಲಕ್ಷ ಕೋಟಿ ರೂ.
  • ಶಿಕ್ಷಣ ಇಲಾಖೆ: 93,234 ಕೋಟಿ ರೂ.

ಬದಲಾಗದ ತೆರಿಗೆ: ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ತೆರಿಗೆ ಪಾವತಿಯನ್ನು ಸರಳೀಕರಿಸುವ ಹಾಗೂ ವಿವಾದ ಬಗೆಹರಿಸುವ ಪರೋಕ್ಷ ಸುಳಿವು ರವಾನೆ. ಹಿರಿಯರಿಗೆ ನಿರಾಳ: 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಪಿಂಚಣಿ ಆದಾಯ, ಠೇವಣಿ ಮೇಲಿನ ಬಡ್ಡಿಗೆ ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೆ ವಿನಾಯಿತಿ ಘೋಷಣೆ.

ಈ ಬಜೆಟ್​ನ ಹೃದಯವೇ ಹಳ್ಳಿಗಳು ಮತ್ತು ರೈತರು. ರೈತರ ಆದಾಯ ಹೆಚ್ಚಿಸಲು ಒತ್ತು ನೀಡಿರುವ ಈ ಆಯವ್ಯಯ ಕೃಷಿಕರ ಅಭ್ಯುದಯಕ್ಕೆ ಪೂರಕ. | ನರೇಂದ್ರ ಮೋದಿ ಪ್ರಧಾನಿ

ರಸ್ತೆ, ವಿದ್ಯುತ್ ಉತ್ಪಾದನೆ, ಸೇತುವೆ, ಬಂದರು ನಿರ್ವಣಕ್ಕಾಗಿ ಮೂಲಸೌಕರ್ಯಗಳಿಗೆ ಹೆಚ್ಚು ಅನುದಾನ ನೀಡಿದ್ದೇವೆ. ಕಳೆದ ವರ್ಷ ನಾವು ಎದುರಿಸಿದ ಸಮಸ್ಯೆಯಿಂದ ಈ ಕ್ಷೇತ್ರದಲ್ಲಿ ಅಗಾಧ ಸಾಮರ್ಥ್ಯವಿದೆ ಎಂಬುದನ್ನು ಮನಗಂಡಿದ್ದೇವೆ. | ನಿರ್ಮಲಾ ಸೀತಾರಾಮನ್ ಕೇಂದ್ರ ವಿತ್ತ ಸಚಿವೆ

ಬರಲಿವೆ ಇನ್ನೂ 4 ಮಿನಿ ಬಜೆಟ್

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 2021-22ನೇ ಸಾಲಿನ ಆಯವ್ಯಯ ಮಂಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಇನ್ನೂ ನಾಲ್ಕು ಮಿನಿ ಆರ್ಥಿಕ ಪ್ಯಾಕೇಜ್​ಗಳು ಘೋಷಣೆ ಆಗುವ ಸುಳಿವು ಸಿಕ್ಕಿದೆ. ದೇಶಕ್ಕೆ ಕರೊನಾ ಕಾಲಿಟ್ಟ ಬಳಿಕ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷ ಸರ್ಕಾರ ಮೂರು ಕಂತಿನಲ್ಲಿ 20 ಲಕ್ಷ ಕೋಟಿ ರೂ.ಗಳ ಮೊತ್ತದ ಆತ್ಮನಿರ್ಭರ ಯೋಜನೆ ಘೋಷಿಸಿತ್ತು. ಅದೇ ಮಾದರಿಯನ್ನು ಮುಂದಿನ ವರ್ಷವೂ ಮುಂದುವರಿಸಲಿದೆ. ಈ ಆಯವ್ಯಯದಲ್ಲಿ ಎಲ್ಲ ವಲಯಗಳಿಗೂ ಆದ್ಯತೆ ನೀಡಿಲ್ಲ. ಇದನ್ನು ಸಹ ಮಿನಿ ಬಜೆಟ್ ಎಂದೇ ಪರಿಗಣಿಸಲಾಗುತ್ತದೆ. ವಿವಿಧ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮಾದರಿಯಲ್ಲಿ ಇನ್ನೂ ನಾಲ್ಕು ಪ್ಯಾಕೇಜ್​ಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಯಾವ ವಲಯಗಳಿಗೆ?: ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಎಂಎಸ್​ಎಂಇ, ಮಾಹಿತಿ ತಂತ್ರಜ್ಞಾನ ಹಾಗೂ ಡಿಜಿಟಲ್ ಇಂಡಿಯಾ ವಲಯಗಳಿಗೆ ಮುಂದಿನ ಪ್ಯಾಕೇಜ್​ಗಳಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದ್ದರಿಂದಲೇ ಬಜೆಟ್​ನಲ್ಲಿ ವಿಸõತವಾಗಿ ಈ ವಲಯಗಳಿಗೆ ಆದ್ಯತೆ ನೀಡಿಲ್ಲವೆಂದು ಮೂಲಗಳು ಖಚಿತಪಡಿಸಿವೆ. ಒಮ್ಮೆಗೆ ಎಲ್ಲ ವಲಯಗಳಿಗೂ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಪ್ರತಿ ಒಂದೂವರೆ ಅಥವಾ ಎರಡು ತಿಂಗಳಿಗೊಮ್ಮೆ ಘೋಷಣೆ ಮಾಡುತ್ತ ಹೋದರೆ ಅದರಿಂದ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಇನ್ನಷ್ಟು ಉತ್ತಮ ಅಭಿಪ್ರಾಯ ಮೂಡಿಸಬಹುದು ಕೇಂದ್ರದ ಲೆಕ್ಕಾಚಾರ. ಇವೆಲ್ಲ ಸಾರ್ವಜನಿಕವಾಗಿ ಹತ್ತಿರವಾಗುವ ಮತ್ತು ಹೆಚ್ಚು ಜನರಿಗೂ ತಲುಪುವ ಕ್ಷೇತ್ರಗಳಾಗಿವೆ. ಆದ್ದರಿಂದಲೇ ಅವುಗಳಿಗೆ ಪ್ರತ್ಯೇಕವಾಗಿ ಆದ್ಯತೆ ನೀಡಲಾಗುತ್ತದೆ. ಈ ಬಜೆಟ್​ನಲ್ಲಿ ಕೃಷಿ, ಆರೋಗ್ಯ, ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಪನ್ಮೂಲ ಕ್ರೋಡೀಕರಣದ ಉದ್ದೇಶದಿಂದ ತೆರಿಗೆ ವಲಯ ಸಹಜವಾಗಿಯೇ ಈ ಬಜೆಟ್​ಗೆ ಸೇರಿದೆ ಎಂದು ಮೂಲಗಳು ಹೇಳುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net